ಪಾರ್ಟ್ ಟೈಮ್ ರಾಜಕಾರಣಿ, ಫುಲ್ ಟೈಮ್ ಟ್ರೋಲ್ , ಈಗ ಬಿಜೆಪಿ ಅಭ್ಯರ್ಥಿ !

Update: 2020-01-22 10:06 GMT
Photo: facebook.com/TajinderPalSinghBaggaNew

ಹೊಸದಿಲ್ಲಿ, ಜ.22: ದಿಲ್ಲಿ ವಿಧಾನಸಭಾ ಚುನಾವಣೆಗೆ ಹರಿನಗರ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಪಕ್ಷದ ವಿವಾದಾತ್ಮಕ ವಕ್ತಾರ ತೇಜಿಂದರ್ ಪಾಲ್ ಸಿಂಗ್ ಬಗ್ಗಾ ಪಾರ್ಟ್ ಟೈಮ್ ರಾಜಕಾರಣಿ ಹಾಗೂ ಫುಲ್ ಟೈಮ್ ಟ್ರೋಲ್ ಎಂದೇ ಹೆಚ್ಚಾಗಿ ಬಣ್ಣಿಸಲ್ಪಡುತ್ತಾರೆ.

ತಮ್ಮನ್ನು ಅಭ್ಯರ್ಥಿಯಾಗಿ ಘೋಷಿಸಿದ ಬೆನ್ನಿಗೇ ಟ್ವಿಟ್ಟರ್‌ನಲ್ಲಿ 6.5 ಲಕ್ಷ ಫಾಲೋವರ್ಸ್‌ ಹೊಂದಿರುವ ಬಗ್ಗಾ ತಮ್ಮ ಪ್ರಚಾರಕ್ಕಾಗಿ ರ್ಯಾಪ್ ಹಾಡೊಂದನ್ನು ಬಿಡುಗಡೆಗೊಳಿಸಿದರಲ್ಲದೆ, ಅರೆ ಕ್ಷಣದಲ್ಲಿ #Bagga4HariNagar ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿತ್ತು. ಬಗ್ಗಾ ಅವರನ್ನು ದಿಲ್ಲಿ ಬಿಜೆಪಿ 2017ರಲ್ಲಿ ತನ್ನ ವಕ್ತಾರನನ್ನಾಗಿ ನೇಮಕಗೊಳಿಸಿತ್ತು.

ಅದೇ ವರ್ಷ ಕಾರವಾನ್ ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ತಮಗೆ ‘ಟ್ರೋಲಿಂಗ್’ ಪದದ ಅರ್ಥ ಕೂಡ ಗೊತ್ತಿಲ್ಲ ಎಂದಿದ್ದರಲ್ಲದೆ ‘‘ಟ್ರೋಲಿಂಗ್ ನಿಂದನಾತ್ಮಕವಾಗಿರಬಾರದು’’ ಎಂದು ಹೇಳಿದ್ದರು.

ಬಗ್ಗಾ ಸುದ್ದಿಯಲ್ಲಿರಲು ಕಾರಣವಾದ ಕೆಲವೊಂದು ಘಟನಾವಳಿಗಳು ಇಲ್ಲಿವೆ.

1. 2011ರಲ್ಲಿ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರು ಕಾಶ್ಮೀರ ಕುರಿತು ನೀಡಿದ ಹೇಳಿಕೆಗೆ ಸಂಬಂಧಿಸಿ ಅವರ ಮೇಲೆ ಅವರ ಚೇಂಬರ್‌ ನಲ್ಲಿ ನಡೆದ ಹಲ್ಲೆ ಘಟನೆಯ ನಂತರ ಬಗ್ಗಾ ಮೊದಲು ಸುದ್ದಿಯಾಗಿದ್ದರು. ಈ ಹಲ್ಲೆಗೆ ಬಗ್ಗಾ ಸ್ಥಾಪಿಸಿದ್ದ ಭಗತ್ ಸಿಂಗ್ ಕ್ರಾಂತಿ ಸೇನಾ ಹೊಣೆ ಹೊತ್ತುಕೊಂಡಿತ್ತು. ‘‘ಸುಪ್ರೀಂ ಕೋರ್ಟ್ ವಕೀಲರೊಬ್ಬರು ದೇಶಕ್ಕಿಂತ ದೊಡ್ಡವರಲ್ಲ’’ ಎಂದು ಬಗ್ಗಾ ಹೇಳಿದ್ದ ವೀಡಿಯೋ ಕೂಡ ಹರಿದಾಡಿತ್ತು. ‘‘ಅವರು ನನ್ನ ದೇಶವನ್ನು ಒಡೆಯಲು ಯತ್ನಿಸಿದರು, ನಾನು ಅವರ ತಲೆಯನ್ನು ಒಡೆಯಲು ಯತ್ನಿಸಿದೆ’’ ಎಂದು ಬಗ್ಗಾ ಟ್ವೀಟ್ ಮಾಡಿದರೂ ನಂತರ ಅದನ್ನು ಡಿಲೀಟ್ ಮಾಡಿದ್ದರಲ್ಲದೆ ಯಾವುದೇ ಪುರಾವೆಯಿಲ್ಲದೆ ತಮ್ಮ ಮೇಲೆ ಆರೋಪ ಹೊರಿಸಲಾಗಿದೆ ಎಂದಿದ್ದರು.

2. 2011ರಲ್ಲಿ ನಡೆದ ಇನ್ನೊಂದು ಘಟನೆಯಲ್ಲಿ ಹಿರಿಯ ಲೇಖಕಿ ಅರುಂಧತಿ ರಾಯ್ ಅವರ ಕೃತಿ ಬಿಡುಗಡೆ ಸಮಾರಂಭ ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ನಡೆದಾಗ ಅದಕ್ಕೆ ಅಡ್ಡಿಪಡಿಸಲು ಬಗ್ಗಾ ಯತ್ನಿಸಿದ್ದರು. ಘಟನೆ ನಡೆದು ಹಲವು ವರ್ಷಗಳ ನಂತರ 2018ರಲ್ಲಿ ಅವರು ಒಂದು ಫೋಟೋ ಪೋಸ್ಟ್ ಮಾಡಿ ‘‘ಅರುಂಧತಿ ರಾಯ್ ಅವರು ಕಾಶ್ಮೀರ ಕುರಿತು ಬೊಗಳುತ್ತಿದ್ದ ಸಂದರ್ಭದ ಹಳೆಯ ನೆನಪುಗಳು’’ ಎಂದು ಶೀರ್ಷಿಕೆ ನೀಡಿದ್ದರು.

3. ಬಗ್ಗಾ ಅವರ ಆನ್‌ಲೈನ್ ಉದ್ಯಮವು ಕಾಶ್ಮೀರದ ವಿವಾದಿತ ಮಾನವ ಗುರಾಣಿ ಪ್ರಕರಣದ ಚಿತ್ರಣವಿರುವ ಟಿ-ಶರ್ಟ್ ಗಳನ್ನು ಮಾರಾಟ ಮಾಡುತ್ತದೆ. ಮೇಜರ್ ಲೀಟುಲ್ ಗೊಗೊಯಿ ಕಲ್ಲು ತೂರಾಟಗಾರರಿಂದ ರಕ್ಷಿಸುವ ಸಲುವಾಗಿ ತಮ್ಮ ಜೀಪಿನ ಎದುರುಗಡೆ ಮಾನವ ಗುರಾಣಿಯಂತೆ ಉಪಚುನಾವಣೆಯಲ್ಲಿ ಮತ ಚಲಾಯಿಸಿ ಹಿಂದಿರುಗುತ್ತಿದ್ದ ಕರಕುಶಲ ಕಲಾವಿದ ಫಾರೂಖ್ ಅಹ್ಮದ್ ದರ್ ಅವರನ್ನು ಕಟ್ಟಿದ್ದ ವಿವಾದಿತ ಘಟನೆ ಅದಾಗಿತ್ತು. ಬಗ್ಗಾ ವಿರುದ್ಧ ಫಾರೂಖ್ ಅಹ್ಮದ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರೂ ‘‘ಸೇನಾಧಿಕಾರಿಯ ಪರಾಕ್ರಮದ ಕ್ರಮಕ್ಕಾಗಿ ತಮ್ಮ ಗೌರವ’’ ಎಂದು ಬಗ್ಗಾ ನಂತರ ಹೇಳಿದ್ದರು.

4. ಇತ್ತೀಚೆಗೆ ಜೆಎನ್‌ಯು ವಿದ್ಯಾರ್ಥಿಗಳ ಮೇಲಿನ ದಾಳಿ ವಿರುದ್ಧ ಮುಂಬೈಯ ಗೇಟ್ ವೇ ಆಫ್ ಇಂಡಿಯಾದಲ್ಲಿ ನಡೆದ ಪ್ರತಿಭಟನೆಯ ವೀಡಿಯೋ ಪೋಸ್ಟ್ ಮಾಡಿದ್ದ ಬಗ್ಗಾ ‘‘ಹಿಂದುವೋ ಸೇ ಆಝಾದಿ’ ಘೋಷಣೆಯನ್ನು ಈ ಬಾರಿ ಜಾಮಿಯಾ ಅಥವಾ ಜೆಎನ್‌ಯುವಿನಲ್ಲಿ ಕೂಗಲಾಗಿಲ್ಲ, ಬದಲು ಮುಂಬೈಯ ಎಡಪಂಥೀಯ ಹಾಗೂ ಮುಸ್ಲಿಂ ವಿದ್ಯಾರ್ಥಿಗಳು ಈ ಘೋಷಣೆ ಕೂಗಿದ್ದಾರೆ’’ ಎಂದು ಬರೆದಿದ್ದರು.
ಪ್ರತಿಭಟನೆ ವೇಳೆ ಹಾಜರಿದ್ದ ನಟಿ ಕೊಂಕೊಣಾ ಸೇನ್ ಶರ್ಮ ಇದನ್ನು ವಿರೋಧಿಸಿದಾಗ, ವೀಡಿಯೋ ತಿರುಚಲ್ಪಟ್ಟಿದೆಯೆಂದು ಸಾಬೀತಾದರೆ ರಾಜಕೀಯ ತೊರೆಯುವುದಾಗಿ ಬಗ್ಗಾ ಹೇಳಿದ್ದರು.

ಪ್ರತಿಭಟನೆ ವೇಳೆ ಅಂತಹ ಘೋಷಣೆ ಕೂಗಲಾಗಿಲ್ಲ ಎಂದು ಆಲ್ಟ್ ನ್ಯೂಸ್ ನಂತರ ಹೇಳಿತ್ತು. ತಮ್ಮ ವೀಡಿಯೋ ಸುಳ್ಳಾದರೆ ರಾಜಕೀಯ ಸನ್ಯಾಸ ಕೈಗೊಳ್ಳುವುದಾಗಿ ಹೇಳಿದ್ದ ಬಗ್ಗಾ ತಮ್ಮ ಮಾತು ಉಳಿಸಿಕೊಂಡಿಲ್ಲ, ಬದಲಾಗಿ ಈಗ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯೂ ಆಗಿದ್ದಾರೆ.

ಕೃಪೆ: huffingtonpost.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News