ಗೋವಾ ಗಣಿಗಾರಿಕೆ ಹಗರಣ: ಪಾರಿಕ್ಕರ್ ಪಾತ್ರದ ಕುರಿತು ಸಿಬಿಐ ತನಿಖೆಗೆ ಕೋರಲಿರುವ ಕಾಂಗ್ರೆಸ್

Update: 2020-01-22 14:32 GMT
ಫೈಲ್ ಚಿತ್ರ

ಪಣಜಿ,ಜ.22: ಕಬ್ಬಿಣ ಅದಿರು ಗಣಿಗಾರಿಕೆ ಗುತ್ತಿಗೆಗಳನ್ನು 2014ರಲ್ಲಿ ಅಕ್ರಮವಾಗಿ ನವೀಕರಿಸಿದ್ದರಲ್ಲಿ ಆಗಿನ ಮುಖ್ಯಮಂತ್ರಿಯಾಗಿ ದಿವಂಗತ ಮನೋಹರ ಪಾರಿಕ್ಕರ್ ಅವರ ಪಾತ್ರದ ಬಗ್ಗೆ ತನಿಖೆಗಾಗಿ ತಾನು ಸಿಬಿಐ ಅನ್ನು ಕೋರಲಿದ್ದೇನೆ ಎಂದು ಕಾಂಗ್ರೆಸ್ ಬುಧವಾರ ತಿಳಿಸಿದೆ. ಈ ಗುತ್ತಿಗೆಗಳನ್ನು ಬಳಿಕ 2018ರಲ್ಲಿ ಸರ್ವೋಚ್ಚ ನ್ಯಾಯಾಲಯವು ರದ್ದುಗೊಳಿಸಿತ್ತು.

ಕಾಂಗೆಸ್‌ನ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಜೆಪಿ,ಅದು ವಿವೇಚನೆಯಿಲ್ಲದೆ ಮಾತನಾಡುತ್ತಿದೆ ಎಂದು ಹೇಳಿದೆ.

 ಗೋವಾ ಲೋಕಾಯುಕ್ತವು ಎರಡು ದಿನಗಳ ಹಿಂದಷ್ಟೇ ಗಣಿಗಾರಿಕೆ ಗುತ್ತಿಗೆಗಳ ನವೀಕರಣ ವಿಷಯದಲ್ಲಿ ಪಾರಿಕ್ಕರ್ ಅವರ ಉತ್ತರಾಧಿಕಾರಿ ಹಾಗೂ ಬಿಜೆಪಿ ನಾಯಕ ಲಕ್ಷ್ಮೀಕಾಂತ ಪಾರ್ಸೇಕರ್ ಅವರ ವಿರುದ್ಧ ಸಿಬಿಐ ವಿಚಾರಣೆಗೆ ಶಿಫಾರಸು ಮಾಡಿತ್ತು. ಆಗಿನ ರಾಜ್ಯ ಗಣಿ ಕಾರ್ಯದರ್ಶಿ ಪವನಕುಮಾರ ಸೈನ್ ಮತ್ತು ಆಗಿನ ಗಣಿಗಾರಿಕೆ ಮತ್ತು ಭೂಗರ್ಭ ವಿಜ್ಞಾನ ನಿರ್ದೇಶಕ ಪ್ರಸನ್ನ ಆಚಾರ್ಯ ವಿರುದ್ಧವೂ ಸಿಬಿಐ ವಿಚಾರಣೆಗೆ ಲೋಕಾಯುಕ್ತವು ಶಿಫಾರಸು ಮಾಡಿದೆ.

ಈ ವಿಷಯದಲ್ಲಿ ಕಾಂಗ್ರೆಸ್ ಅಕ್ಟೋಬರ್ 2018ರಲ್ಲಿ ಆಗಿನ ರಾಜ್ಯಪಾಲರು ಮತ್ತು ಆಗಿನ ಡಿಜಿಪಿಗೆ ದೂರು ಸಲ್ಲಿಸಿತ್ತು,ಆದರೆ ಯಾವುದೇ ಕ್ರಮವನ್ನು ಕೈಗೊಳ್ಳಲಾಗಿರಲಿಲ್ಲ ಎಂದು ಬುಧವಾರ ಮಡಗಾಂವ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದ ಗೋವಾ ಕಾಂಗ್ರೆಸ್ ಅಧ್ಯಕ್ಷ ಗಿರೀಶ ಚೋಡನಕರ್ ಅವರು,ಲೋಕಾಯುಕ್ತರ ಆದೇಶವು ಕಾಂಗ್ರೆಸ್ ನಿಲುವನ್ನು ಎತ್ತಿ ಹಿಡಿದಿದೆ ಎಂದರು.

ಗುತ್ತಿಗೆಗಳ ನವೀಕರಣ ಪ್ರಕ್ರಿಯೆಯನ್ನು ಪಾರಿಕ್ಕರ್ ಅವರು ಆರಂಭಿಸಿದ್ದರು ಮತ್ತು ತಾನದನ್ನು ಮುಂದುವರಿಸಿದ್ದೆ ಅಷ್ಟೇ ಎಂದು ಪಾರ್ಸೇಕರ್ ಅವರೇ ಲೋಕಾಯುಕ್ತಕ್ಕೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ ಎಂದರು.

ಪಾರಿಕ್ಕರ್ ಅವರು ಕೇಂದ್ರ ರಕ್ಷಣಾ ಸಚಿವರಾಗಿ ಪದೋನ್ನತಿ ಪಡೆದ ಬಳಿಕ 2014,ನವೆಂಬರ್‌ನಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ್ದ ಪಾರ್ಸೇಕರ್ ಅವರು 88 ಗಣಿಗಾರಿಕೆ ಗುತ್ತಿಗೆಗಳನ್ನು ನವೀಕರಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News