ಉಡುಪಿಗೆ ವಾರಾಹಿಯಿಂದ ಕುಡಿಯುವ ನೀರು ಯೋಜನೆ: 2021ರಲ್ಲಿ ಪೂರ್ಣಗೊಳಿಸಲು ವಿಧಾನಪರಿಷತ್ ಅರ್ಜಿ ಸಮಿತಿ ತಾಕೀತು

Update: 2020-01-22 14:40 GMT

ಉಡುಪಿ, ಜ. 22: ವಾರಾಹಿಯಿಂದ ಉಡುಪಿ ನಗರಕ್ಕೆ ಕುಡಿಯುವ ನೀರು ಪೂರೈಸುವ ಯೋಜನೆಯನ್ನು 2021ರ ನಿಗದಿತ ಅವಧಿಯೊಳಗೆ ಪೂರ್ಣ ಗೊಳಿಸಿ ಉಡುಪಿ ನಗರದ ಜನತೆಗೆ ಕುಡಿಯುವ ನೀರು ಒದಗಿಸುವಂತೆ ಸಂಬಂಧಿತ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್‌ನ ಉಪ ಸಭಾಪತಿ ಹಾಗೂ ವಿಧಾನ ಪರಿಷತ್‌ನ ಅರ್ಜಿ ಸಮಿತಿಯ ಅಧ್ಯಕ್ಷ ಎಸ್.ಎಲ್.ಧರ್ಮೇಗೌಡ ಹೇಳಿದ್ದಾರೆ.

ಉಡುಪಿ ಜಿಲ್ಲೆಗೆ ಸಂಬಂಧಿಸಿದಂತೆ ರಾಜ್ಯ ವಿಧಾನಪರಿಷತ್‌ನ ಅರ್ಜಿ ಸಮಿತಿಯಲ್ಲಿ ದಾಖಲಾಗಿರುವ ಅರ್ಜಿಗಳ ವಿಚಾರಣೆಯನ್ನು ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಸಿದ ನಂತರ ಸಮಿತಿಯ ಸದಸ್ಯರೊಂದಿಗೆ ಯೋಜನಾ ಪ್ರದೇಶವಾದ ಶಂಕರ ನಾರಾಯಣ ಹಾಗೂ ಹಾಲಾಡಿಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ ಬುಧವಾರ ಸಂಜೆ ಉಡುಪಿಯ ಪ್ರವಾಸಿ ಮಂದಿರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಿತಿ ಪರವಾಗಿ ಮಾತನಾಡುತಿದ್ದರು.

ಯೋಜನೆಯ ಈ ಮೊದಲ ಪ್ರಸ್ತಾಪದಂತೆ ವಾರಾಹಿಯಿಂದ ಕಚ್ಛಾ ನೀರನ್ನು ಪೈಪ್‌ಲೈನ್‌ಗಳ ಮೂಲಕ ಹಿರಿಯಡ್ಕ ಸಮೀಪದ ಬಜೆ ಜಲಾಶಯಕ್ಕೆ ನೀರನ್ನು ತಂದು ಅಲ್ಲಿ ಶುದ್ಧೀಕರಿಸಿ ಉಡುಪಿ ನಗರಕ್ಕೆ ನೀರು ಸರಬರಾಜು ಮಾಡಲು ಯೋಜನೆ ರೂಪಿಸಲಾಗಿತ್ತು. ಆದರೆ ಈಗ ಯೋಜನೆಯನ್ನು ಸಂಪೂರ್ಣವಾಗಿ ಬದಲಿಸಿ, ಹಾಲಾಡಿಯಲ್ಲೇ ನೀರನ್ನು ಶುದ್ಧೀಕರಿಸಿ, ಅದನ್ನು ಪೈಪ್‌ಲೈನ್ ಮೂಲಕ ಮಣಿಪಾಲಕ್ಕೆ ತಂದು ಅಲ್ಲಿಂದ ನಗರಕ್ಕೆ ಸರಬರಾಜು ಮಾಡಲು ಸಮಿತಿಯು ಸೂಚಿಸಿದೆ ಎಂದವರು ನುಡಿದರು.

ಇದರಿಂದ ಹಾಲಾಡಿಯಿಂದ ಮಾರ್ಗಮಧ್ಯೆ ಇರುವ ಗ್ರಾಮಗಳಿಗೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡಲು ಸಾಧ್ಯವಾಗಲಿದೆ. ಈಗಿನ ಯೋಜನೆಯಂತೆ ಹಾಲಾಡಿಯಲ್ಲಿ ಶುದ್ಧೀಕರಣ ಘಟಕ ಹಾಗೂ ಜಾಕ್‌ವೆಲ್ ಗಳನ್ನು ಸ್ಥಾಪಿಸಿ, ಅಲ್ಲಿಂದ ಶುದ್ಧೀಕರಿಸಿದ ನೀರನ್ನು ಮಾರ್ಗ ಮಧ್ಯದ 13 ಗ್ರಾಪಂಗಳ 23 ಗ್ರಾಮಗಳಿಗೆ ಹಾಗೂ ಮೇಲ್ಬಾಗದ ಹಾಲಾಡಿ ಮತ್ತು ಶಂಕರ ನಾರಾಯಣ ಗ್ರಾಮಗಳಿಗೂ ಕುಡಿಯುವ ನೀರನ್ನು ಒದಗಿಸಲು ಸಾಧ್ಯವಾಗಲಿದೆ ಎಂದು ಧರ್ಮೇಗೌಡ ವಿವರಿಸಿದರು.

ರೈತರ ಒಪ್ಪಿಗೆ: ಹೀಗಾಗಿ ಈ ಗ್ರಾಮಗಳ ವ್ಯಾಪ್ತಿಯಲ್ಲಿ ಪೈಪ್‌ಲೈನ್ ಕಾಮಗಾರಿ ಮುಗಿದ ಬಳಿಕಷ್ಟೇ ರಸ್ತೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಈ ಯೋಜನೆಗೆ ವಾರಾಹಿ ಕಾಲುವೆಯಿಂದ ಮಾತ್ರ ನೀರು ಪಡೆಯದೇ ಹೊಳೆಯಿಂದಲೂ ನೀರು ಪಡೆದು ಪೂರೈಸುವಂತೆ ಸೂಚಿಸಲಾ ಗಿದೆ. ವಾರಾಹಿ ಬಲದಂಡೆ ಕಾಲುವೆಯಿಂದ ಉಡುಪಿ ಜನರಿಗೆ ಕುಡಿಯುವ ನೀರು ನೀಡಲು ಆ ಭಾಗದ ರೈತರು ಸಹ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಮಿತಿಯ ಸದಸ್ಯರು ತಿಳಿಸಿದರು.

ಒಟ್ಟಾರೆಯಾಗಿ 270 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಅನುಷ್ಠಾನ ಗೊಳ್ಳಲಿದೆ. ಹಾಲಾಡಿಯಲ್ಲಿ ನೀರು ಶುದ್ಧೀಕರಣ ಘಟಕದ ಸ್ಥಾಪನೆಗೆ ಹಾಗೂ ಜಾಕ್‌ವೆಲ್ ನಿರ್ಮಾಣಕ್ಕೆ ನಾಲ್ಕು ಎಕರೆ ಪ್ರದೇಶವನ್ನು ಖರೀದಿಸಲಾಗಿದೆ. ಕಾಮಗಾರಿ ಆರಂಭಕ್ಕೆ ಅನುಮತಿಯನ್ನೂ ನೀಡಲಾಗಿದೆ ಎಂದು ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಜಿಲ್ಲಾಧಿಕಾರಿ ಜಿ.ಜಗದೀಶ್ ನುಡಿದರು.

ಈ ಕಾಮಗಾರಿಯಲ್ಲಿ ಉನ್ನತ ಗುಣಮಟ್ಟದ ಯಂತ್ರೋಪಕರಣಗಳನ್ನು ಬಳಸಿ ಗುಣಮಟ್ಟದ ಪೈಪ್‌ಗಳನ್ನು ಅಳವಡಿಸುವಂತೆ, ಯೋಜನೆಯ ಅನುಷ್ಠಾನದಲ್ಲಿ ಯಾವುದೇ ಅಡ್ಡಿಗಳು ಬಾರದಂತೆ ಮುನ್ನೆಚ್ಚರಿಕೆ ವಹಿಸುವಂತೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಯೋಜನೆಯ ಪ್ರಯೋಜನ ಕನಿಷ್ಠ 50 ವರ್ಷಗಳವರೆಗೆ ಉಡುಪಿ ಜನತೆಗೆ ದೊರೆಯುವಂತೆ ಕಾಮಗಾರಿ ಅನುಷ್ಠಾನಗೊಳಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಧರ್ಮೇಗೌಡ ತಿಳಿಸಿದರು.

ಯೋಜನೆಯನ್ನು ಎರಡು ವರ್ಷಗಳಲ್ಲಿ ಕಾರ್ಯಗತಗೊಳಿಸುವಂತೆ, ಕಾಮಗಾರಿಯ ಪ್ರಗತಿ ಬಗ್ಗೆ ಪ್ರತಿ 3 ತಿಂಗಳಿಗೊಮ್ಮೆ ಸಮಿತಿಗೆ ವಿವರವಾದ ವರದಿಯನ್ನು ಸಲ್ಲಿಸುವಂತೆ ಹಾಗೂ ಕಾಮಗಾರಿಯ ಪ್ರಗತಿ ಕುಂಠಿತಗೊಂಡಲ್ಲಿ ಅವಶ್ಯಕತೆಗುಣವಾಗಿ ಸಮಿತಿಯು ಜಿಲ್ಲೆಗೆ ಮತ್ತೆ ಭೇಟಿ ನೀಡಿ, ಪರಿಶೀಲಿಸಲು ನಿರ್ಧರಿಸಿರುವುದಾಗಿ ಅವರು ತಿಳಿಸಿದರು.

2022ರೊಳಗೆ ಉಡುಪಿಗೆ ನೀರು:  ಇದರೊಂದಿಗೆ ಕಳೆದ ಮೂರು ದಶಕಗಳಿಂದ ನೆನೆಗುದಿಗೆ ಬಿದ್ದಿರುವ ವಾರಾಹಿ ನೀರಾವರಿ ಯೋಜನೆಯನ್ನೂ ತ್ವರಿತಗತಿಯಲ್ಲಿ ಪೂರ್ಣಗೊಳಿಸಿ, ರೈತರಿಗೆ ನೀರು ಹಾಗೂ ಅಲ್ಲಿನ ಜನತೆಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದ್ದು, ಯೋಜನೆಯ ಅನುಷ್ಠಾನದಲ್ಲಿ ವಿಳಂಬ ಮಾಡುವ ಅಧಿಕಾರಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಉಪ ಸಭಾಪತಿ ಎಚ್ಚರಿಸಿದರು.

ಏನಿದ್ದರೂ ಉಡುಪಿಯ ಜನತೆಗೆ 2022ನೇ ಸಾಲಿನೊಳಗೆ ಶುದ್ದ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದು ಅಧಿಕಾರಿಗಳು ವಿಧಾನಪರಿಷತ್‌ನ ಅರ್ಜಿ ಸಮಿತಿಗೆ ಭರವಸೆ ನೀಡಿದ್ದಾರೆ ಎಂದರು.

ಉಡುಪಿ ಜಿಲ್ಲೆಯ ಜಲ ಸಂಪನ್ಮೂಲ ಇಲಾಖೆ ಹಾಗೂ ಸಣ್ಣ ನೀರಾವರಿ ಇಲಾಖೆಯ ಬಾಕಿ ಇರುವ ನೀರಾವರಿ ಯೋಜನೆಗಳನ್ನೂ ಸಹ ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ಸಮಿತಿ ಪರವಾಗಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಆಶಾವಾದ: ಈ ಯೋಜನೆಯಿಂದ ಉಡುಪಿ ನಗರಕ್ಕೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸೌಲ್ಯ ದೊರೆಯಲಿದ್ದು, ಯೋಜನೆಯ ಅನುಷ್ಠಾನದಲ್ಲಿದ್ದ ಗೊಂದಲಗಳನ್ನು ಬಗೆಹರಿಸಿ, ಕಾಮಗಾರಿ ತ್ವರಿತವಾಗಿ, ಅವಧಿಯೊಳಗೆ ಪೂರೈಸಲು ಅಧಿಕಾರಿ ಗಳಿಗೆ ಸೂಚಿಸಿದ ಕರ್ನಾಟಕ ವಿಧಾನ ಪರಿಷತ್‌ನ ಉಪ ಸಭಾಪತಿ ಹಾಗೂ ಅರ್ಜಿ ಸಮಿತಿಯ ಅಧ್ಯಕ್ಷ ಎಸ್.ಎಲ್. ಧರ್ಮೇಗೌಡ ಹಾಗೂ ಸಮಿತಿಯ ಎಲ್ಲಾ ಸದಸ್ಯರಿಗೆ ಶಾಸಕ ರಘುಪತಿ ಭಟ್ ಕೃತಜ್ಞತೆ ಸಲ್ಲಿಸಿದರು.

ಸಭೆಯಲ್ಲಿ ಕರ್ನಾಟಕ ವಿಧಾನಪರಿಷತ್‌ನ ಅರ್ಜಿ ಸಮಿತಿಯ ಸದಸ್ಯರಾದ ಶಾಸಕ ಎಸ್.ವಿ. ಸಂಕನೂರ್, ಮರಿ ತಿಬ್ಬೇಗೌಡ , ಪ್ರಕಾಶ್ ರಾಥೋಡ್, ರಘುನಾಥ್ ಮಲ್ಕಾಪುರ,ಪಿ.ಆರ್. ರಮೇಶ್, ಮೋಹನ್ ಕೊಂಡಾಜಿ, ಉಡುಪಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಜಿ.ಜಗದೀಶ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News