ಫೆ.2: ಮಡಂತ್ಯಾರ್‌ನಲ್ಲಿ ಕೆಥೋಲಿಕ್ ಮಹಾ ಸಮಾವೇಶ- 2020

Update: 2020-01-22 14:46 GMT

ಮಂಗಳೂರು, ಜ. 22: ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ನೇತೃತ್ವದಲ್ಲಿ ಭಾರತೀಯ ಕೆಥೋಲಿಕ್ ಯುವ ಸಂಚಾಲನ ಮತ್ತು ಕೆಥೋಲಿಕ್ ಮಹಿಳಾ ಮಂಡಳಿಯ ಸಹಯೋಗದಲ್ಲಿ ಮಂಗಳೂರು, ಬೆಳ್ತಂಗಡಿ ಹಾಗೂ ಪುತ್ತೂರು ಧರ್ಮಪ್ರಾಂತಗಳ ಕೆಥೋಲಿಕ್ ಮಹಾ ಸಮಾವೇಶ -2020 ಫೆ.2 ರಂದು ಮಡಂತ್ಯಾರು ಚರ್ಚ್ ಮೈದಾನಿನಲ್ಲಿ ನಡೆಯಲಿದೆ ಎಂದು ಕೆಥೋಲಿಕ್ ಸಭಾ ಮಂಗಳೂರು ಪ್ರದೇಶ್ ಇದರ ಅಧ್ಯಕ್ಷ ಪಾವ್ಲ್ ರೋಲ್ಫಿ ಡಿಕೋಸ್ತಾ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಮಾವೇಶದಲ್ಲಿ 3 ಧರ್ಮ ಪ್ರಾಂತಗಳ ಸುಮಾರು 30,000 ಸಾವಿರ ಮಂದಿ ಸೇರುವ ನೀರಿಕ್ಷೆ ಇದ್ದು, ಕೆಥೋಲಿಕ್ ಕ್ರೈಸ್ತ ಸಮುದಾಯದ ಏಕತೆ ಮತ್ತು ಒಗ್ಗಟ್ಟನ್ನು ಬಲಪಡಿಸುವುದು, ಪ್ರಸ್ತುತ ಸ್ಥಿತಿ- ಗತಿಗಳನ್ನು ವಿರ್ಮರ್ಶಿಸಿ ಸಮದಾಯದ ಏಳಿಗೆಗೆ ಯೋಜನೆಗಳನ್ನು ರೂಪಿಸುವುದು ಹಾಗೂ ಸರಕಾರಿ ಮಟ್ಟದಲ್ಲಿ ಆಗ ಬೇಕಾದ ಕೆಲಸಗಳ ಬಗ್ಗೆ ಹಕ್ಕೊತ್ತಾಯ ಮಂಡಿಸುವುದು ಈ ಸಮಾವೇಶದ ಉದ್ದೇಶ ವಾಗಿದೆ ಎಂದರು.

ದ. ಕ. ಜಿಲ್ಲೆಯಲ್ಲಿ 2.5 ಲಕ್ಷದಿಂದ 3 ಲಕ್ಷ ಕೆಥೋಲಿಕರಿದ್ದಾರೆ. ಸಮುದಾಯವು ಆರೋಗ್ಯ, ಶಿಕ್ಷಣ, ಸಾಮಾಜಿಕ, ರಾಜಕೀಯ ಹಾಗೂ ಕೃಷಿ ಕ್ಷೇತ್ರದಲ್ಲಿ ಜಾತಿ, ಮತ, ಧರ್ಮ ಬೇಧವಿಲ್ಲದೆ, ಸಮಾಜದ ಎಲ್ಲ ವರ್ಗಗಳ ಜನರಿಗೆ ಉತ್ತಮ ಸೇವೆಯನ್ನು ಒದಗಿಸುತ್ತಾ ಬಂದಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ.1.3 ಹಾಗೂ ದೇಶದ ಜನಸಂಖ್ಯೆಯಲ್ಲಿ ಶೇ.2.87ರಷ್ಟು ಇರುವ ಕೆಥೋಲಿ ಕರಿಗೆ ಸಿಗಬೇಕಾದ ರಾಜಕೀಯ ಪ್ರಾತಿನಿಧ್ಯ ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಜನಸಂಖ್ಯೆಯ ಅನುಪಾತದ ಆಧಾರದಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ, ರಾಜ್ಯ, ರಾಷ್ಟ್ರ ರಾಜಕಾರಣದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲು ಹಕ್ಕೋತ್ತಾಯ ಮಂಡಿಸಲಾಗುವುದು ಎಂದರು.

 ಇತ್ತೀಚಿನ ದಿನಗಳಲ್ಲಿ ಯುವಜನರು ಮಾನಸಿಕ ಒತ್ತಡ ಹಾಗೂ ಖಿನ್ನತೆಗೆ ಮತ್ತು ಮಾದಕ ದ್ರವ್ಯಕ್ಕೆ ಬಲಿಯಾಗುವುದು, ಸಮಾಜ ಘಾತುಕ ಕೃತ್ಯಗಳಿಗೆ ಮುಂದಾಗುವುದು, ಸರಕಾರಿ ಸವಲತ್ತು ಪಡೆಯುವಲ್ಲಿ, ಉದ್ಯೋಗ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಆಸಕ್ತಿ ಕಳೆದುಕೊಂಡಿರುವುದು, ಅಪಾಯಕಾರಿ ಪಬ್ಜಿ ಮತ್ತಿತರ ಮೊಬೈಲ್ ಆಟಗಳಲ್ಲಿ ಕಾಲ ಕಳೆಯುವ ಮೂಲಕ ಹೆತ್ತವರು, ಒಡ ಹುಟ್ಟಿದವರ ಜತೆ ಹಾಗೂ ಸಮಾಜ ಬಾಂಧವರಿಂದ ಸಂಬಂಧ ಕಳೆದು ಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗೆ ಒಳಗಾಗದಂತೆ ಜಾಗೃತಿ ಮೂಢಿಸಿ ಅವರ ಭವಿಷ್ಯ ರೂಪಿಸಲು ನೆರವಾಗುವುದು ಸಮಾವೇಶದ ಗುರಿಯಾಗಿದೆ. ರಾಜ್ಯದಲ್ಲಿ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪಿಸಿ 500 ಕೋ.ರೂ. ಅನುದಾನ ಮೀಸಲಿಡುವುದು, ಕನ್ಯಾ ಮರಿಯಮ್ಮನವರ ಜಯಂತಿ ಹಾಗೂ ತೆನೆ ಹಬ್ಬದ ದಿನವಾದ ಸೆ. 8ರಂದು ಸರಕಾರಿ ರಜೆ ಘೋಷಿಸುವಂತೆ ಆಗ್ರಹಿಸಲಾಗುವುದು ಎಂದರು.

ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಮಡಂತ್ಯಾರು ಪೇಟೆಯಲ್ಲಿ ಬೆಳಗ್ಗೆ 9ಕ್ಕೆ ಸಮಾವೇಶದ ಮೆರವಣಿಗೆಗೆ ಚಾಲನೆ ನೀಡಿ ಸಭಾ ಕಾರ್ಯಕ್ರಮ ಉದ್ಘಾಟಿಸುವರು. ಪುತ್ತೂರು ಧರ್ಮಪ್ರಾಂತದ ಬಿಷಪ್ ಅ. ವಂ. ಡಾ. ಗೀವರ್ಗೀಸ್ ಮಾರ್ ಮಕಾರಿಯೊಸ್ ಆಶೀರ್ವಚನ ನೀಡುವರು. ಬೆಳ್ತಂಗಡಿಯ ಬಿಷಪ್ ಅ. ವಂ.ಡಾ. ಲಾರೆನ್ಸ್ ಮುಕ್ಕುಝಿ ದಿಕ್ಸೂಚಿ ಭಾಷಣ ಮಾಡುವರು. ಅನಿವಾಸಿ ಉದ್ಯಮಿ ರೊನಾಲ್ಡ್ ಕುಲಾಸೊ, ಕೆಪಿಎಸ್‌ಸಿ ಸದಸ್ಯ ರೊನಾಲ್ಡ್ ಫೆರ್ನಾಂಡಿಸ್, ಪೊಲೀಸ್ ಆಯುಕ್ತ ಡಾ. ಹರ್ಷ ಪಿ.ಎಸ್. ಮತ್ತು ಲೀಡಿಯಾ ಲೋಬೊ ವಿಚಾರ ಮಂಡಿಸುವರು.

ಸನ್ಮಾನ : ಮಂಗಳೂರು ಧರ್ಮಪ್ರಾಂತದ 124 ಚರ್ಚ್‌ಗಳ ಎಲ್ಲಾ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿಗಳನ್ನು ಗೌರವಿಸಲಾಗುವುದು.

ಮುಂದಿನ ಯೋಜನೆ : ಕೆಥೋಲಿಕ್ ಸಮಾವೇಶ ಸಮಿತಿ, ಲಿಂಕ್ ಡಿಅಡಿಕ್ಷನ್ ಮತ್ತು ಆಪ್ತ ಸಮಾಲೋಚನ ಕೇಂದ್ರಗಳ ಸಹಭಾಗಿತ್ವದಲ್ಲಿ ಯುವ ಜನತೆ ಹಾಗೂ ಎಲ್ಲಾ ವಯೋಮಾನದವರಿಗೆ ಸಹಾಯವಾಗುವ ಜೀವನ ಕೌಶಲ್ಯಗಳನ್ನು ಕಲಿಸಿ ಕೊಡುವುದು, ವಿವಿಧ ಕಾರಣಗಳಿಂದ ಒತ್ತಡಕ್ಕೆ ಬಲಿಯಾಗುತ್ತಿರುವ ಎಲ್ಲಾ ಧರ್ಮೀಯರಿಗೆ ಆಪ್ತ ಸಮಾಲೋಚನೆ ಮುಖಾಂತರ ಸಹಾಯ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಂತಹ ಕಾರ್ಯಕ್ರಮ ನಮ್ಮ ಮುಂದಿನ ಯೋಜನೆಯಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಹಾ ಸಮಾವೇಶ ಸಮಿತಿಯ ಸಂಚಾಲಕ ಜೋಯಲ್ ಮೆಂಡೊನ್ಸಾ, ಫಾ.ಮ್ಯಾಥ್ಯೂ ವಾಸ್, ಫಾ. ರೊನಾಲ್ಡ್ ಡಿಸೋಜಾ, ಫಾ. ಫ್ರಾನ್ಸಿಸ್ ಡಿಸೋಜ, ಫಾ. ಸ್ಟ್ಯಾನಿ ಪಿಂಟೊ, ಟೆರಿ ಪಾಯ್ಸಾ, ಲಿಯೋನ್ ಸಲ್ಡಾನ್ಹಾ, ಲ್ಯಾನ್ಸಿ ಡಿ’ಕುನ್ಹಾ, ಎಲ್.ಜೆ. ಫೆರ್ನಾಂಡಿಸ್, ಇ. ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News