'ಆಗಾಗ ಉದ್ಯೋಗ ಬದಲಿಸುತ್ತಿದ್ದ ಆರೋಪಿ ಆದಿತ್ಯ ರಾವ್'

Update: 2020-01-22 16:17 GMT

ಮಣಿಪಾಲ, ಜ. 22: ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಸಾಮಗ್ರಿ ಪತ್ತೆ ಪ್ರಕರಣದ ಆರೋಪಿ ಮಣಿಪಾಲ ಮೂಲದ ಆದಿತ್ಯ ರಾವ್, ಚಂಚಲಚಿತ್ತ ಸ್ವಭಾವದ ವಿಚಿತ್ರ ವ್ಯಕ್ತಿತ್ವದ ವ್ಯಕ್ತಿ ಎಂದು ಆತನನ್ನು ಅರಿತವರು ಹಾಗೂ ಒಡನಾಡಿದವರ ಅಭಿಪ್ರಾಯವಾಗಿದೆ.

ಮಣಿಪಾಲ ಅನಂತರನಗರದ ಮಣಿಪಳ್ಳ ಸಮೀಪ ಇರುವ ಆದಿತ್ಯ ರಾವ್ ಕುಟುಂಬ ವಾಸವಾಗಿದ್ದ ಎರಡು ಮಹಡಿಯ ಮನೆ ‘ಶ್ರೀಕೃಷ್ಣಪ್ರಸಾದ’ ಮನೆಯಲ್ಲಿ ಸದ್ಯ ಯಾರೂ ವಾಸವಾಗಿಲ್ಲ. ಈಗಾಗಲೇ ಸಾಕ್ಷ್ಯ ಸಂಗ್ರಹಕ್ಕೆ ಮಣಿಪಾಲ ಠಾಣೆಯ ಪೊಲೀಸರು ಉಡುಪಿ ಎಸ್ಪಿಯವರ ಸೂಚನೆಯಂತೆ ಇಲ್ಲಿಗೆ ಬಂದು ದಾಖಲೆಗಳ ಹುಡುಕಾಟ ನಡೆಸಿದ್ದು, ಅಕ್ಕಪಕ್ಕದ ಮನೆಯವರನ್ನು ವಿಚಾರಿಸಿದ್ದಾರೆ ಎಂದು ತಿಳಿದುಬಂದಿದೆ.

ಆದಿತ್ಯ ರಾವ್‌ ತಂದೆ ನಿವೃತ್ತ ಬ್ಯಾಂಕ್ ಅಧಿಕಾರಿಯಾಗಿರುವ ಕೆ. ಕೃಷ್ಣಮೂರ್ತಿ ರಾವ್‌ರ ಕುಟುಂಬದ ಬಗ್ಗೆ ಅಕ್ಕಪಕ್ಕದ ಮನೆಯವರು ಒಳ್ಳೆಯ ಮಾತುಗಳನ್ನೇ ಹೇಳುತ್ತಾರೆ. ಆದಿತ್ಯನ ತಾಯಿಯನ್ನು ಹೊರತುಪಡಿಸಿ ಉಳಿದವರು ಹೆಚ್ಚಾಗಿ ಯಾರೊಂದಿಗೂ ಬೆರೆಯುತ್ತಿರಲಿಲ್ಲ ಎಂದು ಅವರು ನೆನಪಿಸಿಕೊಳ್ಳುತ್ತಾರೆ.

ಮೂಡುಬಿದಿರೆಯಲ್ಲಿ ಬ್ಯಾಂಕ್ ನೌಕರಿಯಲ್ಲಿರುವ ತಮ್ಮ ಅಕ್ಷತ್ ರಾವ್ ಬಗ್ಗೆ ತಾಯಿ ಮಾತನಾಡಿದರೂ ಆದಿತ್ಯನ ಬಗ್ಗೆ ಹೆಚ್ಚು ಮಾತನಾಡುತ್ತಿರಲಿಲ್ಲ. ಆದಿತ್ಯ ರಾವ್‌ ನನ್ನು ನಾನು ಹೆಚ್ಚಾಗಿ ಕಂಡೇ ಇಲ್ಲ ಎಂದು ಪಕ್ಕದ ಮನೆಯ ನಿವಾಸಿ ಪೂರ್ಣಿಮಾ ಹೇಳುತ್ತಾರೆ.

ಕಳೆದ ಫೆಬ್ರವರಿಯಲ್ಲಿ ತಾಯಿ ಕ್ಯಾನ್ಸರ್‌ನಿಂದ ತೀರಿಕೊಂಡ ಬಳಿಕ ತಂದೆ ಸಹ ಮನೆಗೆ ಬೀಗ ಹಾಕಿ ಕಿರಿಯ ಮಗನೊಂದಿಗೆ ಮಂಗಳೂರಿನಲ್ಲಿ ಮನೆ ಮಾಡಿದ್ದಾರೆ. ತಿಂಗಳಿಗೊಮ್ಮೆ ಇಲ್ಲಿಗೆ ಬಂದು ಹೋಗುತ್ತಿದ್ದರು. ಕಳೆದ ವಾರವೂ ಅವರು ಇಲ್ಲಿಗೆ ಬಂದು ಹೋಗಿದ್ದಾರೆ ಎಂದು ಮತ್ತೊಂದು ಮನೆಯವರು ತಿಳಿಸಿದರು. ಆದಿತ್ಯ ಕೆಲ ತಿಂಗಳ ಹಿಂದೆ ಇಲ್ಲಿಗೆ ಬಂದು ಹೋಗಿದ್ದ ಎಂದವರು ತಿಳಿಸಿದರು.

‘ಆದಿತ್ಯನ ಕುಟುಂಬ ಬೇರೆಯವರ ಜೊತೆ ಬೆರೆಯುತ್ತಿರಲಿಲ್ಲ. ಅನಂತನಗರದ ಬಹುತೇಕ ಮನೆಯವರು ಸ್ಥಿತಿವಂತರು. ದೊಡ್ಡ ದೊಡ್ಡ ಮನೆಯಲ್ಲಿ ವಾಸಿಸುವವರು. ಹೀಗಾಗಿ ಅವರ ಪಾಡಿಗೆ ಅವರು ಇರುತಿದ್ದರು. ಆದಿತ್ಯನ ತಂದೆ ತಾಯಿ ಅಪರೂಪಕ್ಕೆ ನೋಡಲು ಸಿಗುತ್ತಿದ್ದರು. ಆದರೆ ಆದಿತ್ಯ ರಾವ್‌ನನ್ನು ಸ್ಥಳೀಯರು ನೋಡಿ ಬಹಳ ವರ್ಷಗಳಾಗಿವೆ.’ ಎಂದರು ಸ್ಥಳೀಯ ನಿವಾಸ ಗಣೇಶ್ ರಾಜ್ ಸರಳಬೆಟ್ಟು.

ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದ ಬಳಿಕ ಮಣಿಪಾಲದಲ್ಲಿ ಎಂಬಿಎ ಓದಿದ ಆದಿತ್ಯ ರಾವ್, ವಿಚಿತ್ರ ಸ್ವಭಾವದ ವ್ಯಕ್ತಿ ಎಂಬುದು ಎಲ್ಲರ ಅನಿಸಿಕೆ. ಆತ ಯಾವ ಉದ್ಯೋಗದಲ್ಲೂ ಹೆಚ್ಚು ಕಾಲ ನಿಲ್ಲುತ್ತಿರಲಿಲ್ಲ. ಬ್ಯಾಂಕ್ ಒಂದರಲ್ಲಿ ಆರಂಭಿಕ ಉದ್ಯೋಗದಲ್ಲಿ 2-3 ವರ್ಷ ಇದ್ದ ಬಳಿಕ ಆತ 5-6 ತಿಂಗಳಿಗೊಂದು ಉದ್ಯೋಗ ಬದಲಿಸುತ್ತಿದ್ದ. ಸೆಕ್ಯುರಿಟಿ ಗಾರ್ಡ್, ಹೊಟೇಲ್ ನಲ್ಲೂ ದುಡಿಯಲು ಆತ ಮುಂದಾದ. 2013ರಲ್ಲಿ ಸುಮಾರು 3-4 ತಿಂಗಳುಗಳ ಕಾಲ ಆತ ಉಡುಪಿಯ ಮಠವೊಂದರಲ್ಲಿ ಅಡುಗೆಗೆ ಸಂಬಂಧಿಸಿದ ಕೆಲಸವನ್ನೂ ಮಾಡಿದ್ದ. ಇದರಿಂದ ಬೇಸತ್ತ ಹೆತ್ತವರು ಆತನನ್ನು ಬಲವಂತವಾಗಿ ಬೆಂಗಳೂರಿಗೆ ಬೇರೆ ಕೆಲಸ ಹುಡುಕಲು ಕಳುಹಿಸಿದ್ದರು ಎಂದು ಹೇಳಲಾಗುತ್ತಿದೆ.

ಮಣ್ಣಪಳ್ಳದ ‘ಶ್ರೀಕೃಷ್ಣಪ್ರಸಾದ’ ಮನೆಗೆ ನಾನು ನಿಯಮಿತವಾಗಿ ಹಾಲು ಸರಬರಾಜು ಮಾಡುತ್ತಿದ್ದೆ. ಆದರೆ ಮನೆಯಲ್ಲಿ ನಾನು ಯಾವತ್ತೂ ಆದಿತ್ಯನನ್ನು ನೋಡಿರಲಿಲ್ಲ. ಆತನ ವೃದ್ಧ ತಂದೆ-ತಾಯಿಯ ಮೂಲಕವೇ ಆದಿತ್ಯನ ಬಗ್ಗೆ ತಿಳಿದಿದ್ದು. ತಾವು ಮಗನನ್ನು ಚೆನ್ನಾಗಿ ಓದಿಸಿದ್ದರೂ, ಆತನಿಗೆ ಬಯಸಿದ ಉದ್ಯೋಗ ಸಿಗದ ಬಗ್ಗೆ ತುಂಬಾ ಅಪ್‌ಸೆಟ್ ಆಗಿದ್ದಾನೆ ಎಂದವರು ಹೇಳುತ್ತಿದ್ದರು.

-ಮೋಹನದಾಸ ಪಡ್ಕರ್, ಮನೆಗೆ ಹಾಲು ಸರಬರಾಜು ಮಾಡುತ್ತಿದ್ದವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News