ಜ.30ರ ಸಿಎಎ, ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಗೆ ‘ರಾವಣ್’

Update: 2020-01-22 16:42 GMT

ಉಡುಪಿ, ಜ.22: ಉಡುಪಿಯ ಸಹಬಾಳ್ವೆ, ಜಾತ್ಯತೀತ ನಿಲುವಿನ ವಿವಿಧ ರಾಜಕೀಯ ಪಕ್ಷಗಳು, ಪ್ರಗತಿಪರ ಮಹಿಳಾ, ವಿದ್ಯಾರ್ಥಿ, ಯುವ, ಕಾರ್ಮಿಕ ಸಂಘಟನೆಗಳೊಂದಿಗೆ ದಲಿತ ಸಂಘಟನೆಗಳ ಸಹಯೋಗದೊಂದಿಗೆ ಜ.30ರ ಸಂಜೆ ಉಡುಪಿಯಲ್ಲಿ ಆಯೋಜಿಸಿರುವ ಕೇಂದ್ರ ಸರಕಾರದ ಕರಾಳ ಕಾನೂನುಗಳಾದ ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್ ವಿರೋಧಿಸಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನಾ ಸಭೆಯಲ್ಲಿ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಝಾದ್ ರಾವಣ್ ಪಾಲ್ಗೊಳ್ಳಲಿದ್ದಾರೆ.

ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆಯ ಅಧ್ಯಕ್ಷ ಅಮೃತ ಶೆಣೈ ಅವರು ಈ ವಿಷಯ ಪ್ರಕಟಿಸಿದರು. ಪ್ರತಿಭಟನಾ ಸಭೆ ಸಂಜೆ 4 ಗಂಟೆಗೆ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ನಡೆಯಲಿದೆ ಎಂದರು.

ಗುರುವಾರ ಅಪರಾಹ್ನ 2:30ಕ್ಕೆ ಬನ್ನಂಜೆಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಕಚೇರಿ ಸಮೀಪದಿಂದ ಬೃಹತ್ ಪಾದಯಾತ್ರೆ ಪ್ರಾರಂಭಗೊಳ್ಳಲಿದೆ. ಈ ಮೆರವಣಿಗೆಯು ಬನ್ನಂಜೆ, ಸಿಟಿಬಸ್ ನಿಲ್ದಾಣ, ಕ್ಲಾಕ್ ಟವರ್, ಮಿಷನ್ ಆಸ್ಪತ್ರೆ ಮಾರ್ಗವಾಗಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನ ತಲುಪಲಿದೆ ಎಂದವರು ವಿವರಿಸಿದರು.

ಸಭೆಯನ್ನುದ್ದೇಶಿಸಿ ಚಂದ್ರಶೇಖರ್ ಆಝಾದ್ ರಾವಣ್ ಪ್ರಧಾನ ಭಾಷಣ ಮಾಡಲಿದ್ದಾರೆ. ಉಳಿದಂತೆ ನಿವೃತ್ತ ಐಎಎಸ್ ಅಧಿಕಾರಿ ಸಸಿಕಾಂತ್ ಸೆಂತಿಲ್, ಚಿಂತಕ ಮಹೇಂದ್ರಕುಮಾರ್, ಸಾಮಾಜಿಕ ಹೋರಾಟಗಾರರಾದ ಕವಿತಾ ರೆಡ್ಡಿ ಹಾಗೂ ಮೆಹರೋಝ್ ಖಾನ್, ಯುವ ಹೋರಾಟಗಾರ್ತಿ ನಝ್ಮಿ ನಝೀರ್ ಹಾಗೂ ವಿದ್ಯಾರ್ಥಿ ಮುಖಂಡರಾದ ಅಮೂಲ್ಯ ಮಾತನಾಡಲಿದ್ದಾರೆ ಎಂದರು.

ಕೇಂದ್ರ ಸರಕಾರ ಜಾರಿಗೊಳಿಸಿರುವ ಪೌರತ್ವ ತಿದ್ದುಪಡಿ ಕಾಯ್ದೆ ಭಾರತದ ಸಮಗ್ರತೆ ಹಾಗೂ ಭಾರತ ಸಂವಿಧಾನದ ಮೂಲ ತತ್ವಕ್ಕೆ ವಿರುದ್ಧವಾದುದು. ಇದನ್ನು ನಾವು ದೇಶದ ಬಹುಸಂಖ್ಯಾತರಂತೆ ಧಿಕ್ಕರಿಸುತ್ತೇವೆ. ಸಿಎಎ, ಪಾಕಿಸ್ತಾನ, ಅಪಘಾನಿಸ್ತಾನ ಹಾಗೂ ಬಾಂಗ್ಲಾದೇಶಗಳಲ್ಲಿ ‘ಧಾರ್ಮಿಕ ದಮನಕ್ಕೆ ತುತ್ತಾಗಿ ನಿರಾಶ್ರಿತರಾಗಿರುವ‘ ಮುಸ್ಲಿಮೇತರ ವಲಸೆಗಾರರಿಗೆ ಭಾರತದ ಪೌರತ್ವ ನೀಡುವುದಕ್ಕೆ ತಂದಿರುವ ಕಾಯ್ದೆಯಾಗಿದ್ದು ಇದಕ್ಕೆ ನಮ್ಮ ತಕರಾರಿಲ್ಲ. ಆದರೆ ಇದೇ ದೇಶಗಳ ಧಾರ್ಮಿಕ ದಮನಕ್ಕೆ ತುತ್ತಾದ ಮುಸಲ್ಮಾರನ್ನು ಕಾಯ್ದೆಯಿಂದ ಹೊರಗಿಟ್ಟಿರುವುದಕ್ಕೆ ನಮ್ಮ ತೀವ್ರ ವಿರೋಧವಿದೆ ಎಂದು ಅಮೃತ ಶೆಣೈ ತಿಳಿಸಿದರು.

ಮುಸ್ಲಿಮರನ್ನು ಇತರ ಧರ್ಮಗಳ ಜನರಿಂದ ಬೇರ್ಪಡಿಸುವ ಕೋಮು ವಿಭಜಕ ಉದ್ದೇಶ ಮಾತ್ರ ಇದರಲ್ಲಿದೆ. ಇದು ಭಾರತ ಒಪ್ಪಿಕೊಂಡಿರುವ ಸಂವಿಧಾನದ ಮೂಲತತ್ವಕ್ಕೆ ವಿರುದ್ಧವಾದುದು. ಅಲ್ಲದೇ ಭಾರತ ಒಪ್ಪಿಕೊಂಡಿರುವ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ನ್ಯಾಯ ಪ್ರಣಾಳಿಕೆ ಹಾಗೂ ಅಂತಾರಾಷ್ಟ್ರೀಯ ಜನಾಂಗೀಯ ತಾರತಮ್ಯ ತಡೆ ಒಪ್ಪಂದಕ್ಕೆ ವಿರುದ್ಧ ವಾಗಿದೆ. ದೇಶದ ಸಮಾನತೆ ಹಾಗೂ ಸಹೋದರತ್ವದ ಮೂಲತತ್ವಕ್ಕೆ ಇದು ಮಾರಕಾಗಿರುವುದರಿಂದ ನಾವು ಈ ಕಾಯ್ದೆಯನ್ನು ಧಿಕ್ಕರಿಸುತ್ತೇವೆ ಎಂದರು.

ಜ.30 ಮಹಾತ್ಮಗಾಂಧಿ, ಗೋಡ್ಸೆ ಎಂಬ ಹಂತಕನ ಗುಂಡಿಗೆ ಬಲಿಯಾದ ದಿನ. ಈ ದಿನದಂದು ಮತಾಧಾರಿತ ರಾಷ್ಟ್ರದ ಕಲ್ಪನೆಯ ಅಮಾನವೀಯತೆ ಯನ್ನು ಎಳೆಎಳೆಯಾಗಿ ಬಿಡಿಸಿಟ್ಟು, ಅಧಿಕಾರ ವಂಚಿತ ಜನಸಮೂಹದ ಒಗ್ಗಟ್ಟಿಗೆ ಸಾಮಾಜಿಕ ರಾಜಕೀಯ ಹಕ್ಕುಗಳನ್ನು ನೀಡುವ ಸಂವಿಧಾನದ ವೌಲ್ಯಗಳನ್ನು ಕಾಪಾಡುವ ಉದ್ದೇಶದಿಂದ ಉಡುಪಿಯಲ್ಲಿ ಈ ಸಮಾವೇಶ ವನ್ನು ಆಯೋಜಿಸಲಾಗಿದೆ ಎಂದು ದಸಂಸ ಅಂಬೇಡ್ಕರ್ ವಾದದ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್ ತಿಳಿಸಿದರು.

ರಾಷ್ಟ್ರಧ್ವಜವನ್ನು ಹಿಡಿದು ನಡೆಯುವ ನಮ್ಮ ಪ್ರತಿಭಟನೆ ಶಾಂತಿಯುತವಾಗಿರುತ್ತದೆ. ಇದು ಯಾವುದೇ ಪಕ್ಷದ ವಿರುದ್ಧವಲ್ಲ. ಸರಕಾರದ ನೀತಿಗಳನ್ನು ವಿರೋಧಿಸಿ ನಾವೀ ಪ್ರತಿಭಟನೆ ಹಮ್ಮಿಕೊಂಡಿದ್ದೇವೆ. ಈ ಪ್ರತಿಭಟನೆಗೆ ಅನುಮತಿ ಕೋರಿ ಈಗಾಗಲೇ ಲಿಖಿತ ಮನವಿಯಲ್ಲಿ ಸಲ್ಲಿಸಿದ್ದೇವೆ. ಅನುಮತಿ ದೊರೆಯುವ ಭರವಸೆ ಇದೆ ಎಂದು ಅಮೃತ ಶೆಣೈ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಹಬಾಳ್ವೆಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಉದ್ಯಾವರ, ಉಪಾಧ್ಯಕ್ಷ ಶಶಿಧರ ಹೆಮ್ಮಾಡಿ, ಗೌರವಾಧ್ಯಕ್ಷ ವಂ.ವಿಲಿಯಂ ಮಾರ್ಟಿಸ್, ಅಬೂಬಕ್ಕರ್ ನೇಜಾರ್, ಸಂಚಾಲಕ ಪ್ರಶಾಂತ್ ಜತ್ತನ್ನ, ಕಲೀಲ್, ಚಂದ್ರಿಕಾ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News