ನಿಷೇಧಿತ ಸಂಘಟನೆಗಳ ಸದಸ್ಯರಿಗೆ ವಿಶ್ವಸಂಸ್ಥೆಯ ಸಲಹಾ ಸ್ಥಾನಮಾನವಿಲ್ಲ: ಭಾರತದ ಮನವಿಗೆ ಪುರಸ್ಕಾರ

Update: 2020-01-22 16:42 GMT

ವಿಶ್ವಸಂಸ್ಥೆ, ಜ. 22: ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಮಂಡಳಿ (ಎಕೊಸಾಕ್)ಯ ಸಲಹೆಗಾರರಾಗಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ)ಯಿಂದ ನಿಷೇಧಿಸಲ್ಪಟ್ಟಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ನೇಮಿಸಬಾರದು ಎಂಬ ಭಾರತದ ಪ್ರಸ್ತಾಪವನ್ನು ವಿಶ್ವಸಂಸ್ಥೆಯು ಅಂಗೀಕರಿಸಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಿಸಲ್ಪಟ್ಟಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ವಿಶ್ವಸಂಸ್ಥೆಯೊಂದಿಗೆ ಗುರುತಿಸಿಕೊಳ್ಳುವುದನ್ನು ಈ ಕ್ರಮವು ತಡೆಯುತ್ತದೆ.

ಎಕೊಸಾಕ್‌ನಲ್ಲಿ ಸಲಹಾ ಸ್ಥಾನಮಾನ ಕೋರುವ ಎನ್‌ಜಿಒಗಳಿಗೆ ಹೆಚ್ಚುವರಿ ತಪಾಸಣಾ ಪ್ರಶ್ನೆಗಳನ್ನು ಕೇಳಲು ವಿಶ್ವಸಂಸ್ಥೆಯ ಎನ್‌ಜಿಒ ಸಮಿತಿ ತೆಗೆದುಕೊಂಡಿರುವ ನಿರ್ಧಾರವನ್ನು ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ನಿಯೋಗದ ಸಲಹೆಗಾರ್ತಿ ಪೌಲೋಮಿ ತ್ರಿಪಾಠಿ ಸ್ವಾಗತಿಸಿದ್ದಾರೆ.

ಹೆಚ್ಚುವರಿ ತಪಾಸಣಾ ಪ್ರಶ್ನೆಗಳು ನಿರ್ದಿಷ್ಟ ಎನ್‌ಜಿಒ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದ ನಿಷೇಧಕ್ಕೊಳಗಾಗಿರುವ ಸಂಸ್ಥೆಗಳು ಮತ್ತು ವ್ಯಕ್ತಿಗಳೊಂದಿಗೆ ಹೊಂದಿರಬಹುದಾದ ಸಂಬಂಧಗಳಿಗೆ ಸಂಬಂಧಿಸಿರುತ್ತವೆ.

2017 ಜುಲೈ ಮತ್ತು 2019 ಜೂನ್‌ನಲ್ಲಿ ಸಂಭವಿಸಿದ ಎರಡು ಘಟನೆಗಳ ಹಿನ್ನೆಲೆಯಲ್ಲಿ ಈ ಸಂಬಂಧ ಭಾರತ ವಿಶ್ವಸಂಸ್ಥೆಗೆ ಮನವಿ ಸಲ್ಲಿಸಿದೆ. 2017ರಲ್ಲಿ ಫೌಂಡೇಶನ್ ಅಲ್ಕಾರಾಮ ಎಂಬ ಸಂಘಟನೆಯು ಭಯೋತ್ಪಾದಕರೊಂದಿಗೆ ನಂಟು ಹೊಂದಿದೆ ಎಂಬುದಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಅದಕ್ಕೆ ಸಲಹಾ ಸ್ಥಾನಮಾನ ನೀಡಲು ತೆಗೆದುಕೊಂಡಿದ್ದ ನಿರ್ಧಾರವನ್ನು ಎಕೊಸಾಕ್ ವಾಪಸ್ ತೆಗೆದುಕೊಂಡಿತ್ತು.

2019 ಜೂನ್‌ನಲ್ಲಿ ಫೆಲೆಸ್ತೀನ್ ಅಸೋಸಿಯೇಶನ್ ಫಾರ್ ಹ್ಯೂಮನ್ ರೈಟ್ಸ್ ವಿಟ್ನೆಸ್ ಎಂಬ ಸಂಘಟನೆಗೆ ಸಲಹಾ ಸ್ಥಾನಮಾನ ನೀಡಲು ಎಕೊಸಾಕ್‌ನ ಎನ್‌ಜಿಒ ಸಮಿತಿ ನಿರ್ಧರಿಸಿತ್ತು. ಆದರೆ, ಆ ಸಂಸ್ಥೆಯು ಹಮಾಸ್ ಜೊತೆಗಿನ ತನ್ನ ನಂಟನ್ನು ಬಹಿರಂಗಪಡಿಸಿಲ್ಲ ಎಂಬುದಾಗಿ ಇಸ್ರೇಲ್ ಆಕ್ಷೇಪಿಸಿದ ಬಳಿಕ ವಿಶ್ವಸಂಸ್ಥೆಯು ತನ್ನ ನಿರ್ಧಾರದಿಂದ ಹಿಂದೆ ಸರಿದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News