ಆರೋಪಿಗೆ ಕುಮ್ಮಕ್ಕು ನೀಡಿದವರ್ಯಾರು ತನಿಖೆಯಾಗಲಿ: ಯು.ಟಿ.ಖಾದರ್

Update: 2020-01-22 17:07 GMT

ಮಂಗಳೂರು, ಜ.22: ಬಜ್ಪೆಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕವನ್ನು ಇರಿಸಿದ ಆರೋಪಿಯಿಂದ ಈ ಕೃತ್ಯ ಮಾಡಿಸಿದವರು ಯಾರು ಎಂಬುದು ತನಿಖೆ ಆಗಬೇಕು. ಇದರ ಹಿಂದೆ ಸಂಚು ಇರುವುದು ಸ್ಪಷ್ಟ ಎಂದು ಮಾಜಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಎಂಬುದು ಗಂಭೀರ ಪ್ರಕರಣ. ಸಮಾಜದ್ರೋಹಿ ಶಕ್ತಿಗಳು ಎಲ್ಲಾ ಧರ್ಮಗಳಲ್ಲೂ ಇದ್ದಾರೆ. ಪ್ರಸ್ತುತ ಆತ ಮಾನಸಿಕ ಖಿನ್ನತೆ ಉಳ್ಳವನು ಎನ್ನಲಾಗುತ್ತಿದೆ. ಆದರೆ, ಆತ ಸ್ಫೋಟಕ ಇರಿಸಿ, ಅಲ್ಲಿಂದ ಸಲೀಸಾಗಿ ತಪ್ಪಿಸಿಕೊಂಡು ಬೆಂಗಳೂರಿಗೆ ತೆರಳಿ ಪೊಲೀಸರೆದುರು ಶರಣಾಗುವವರೆಗೆ ಹೇಗೆ ಸರಿ ಇದ್ದ ಎಂಬ ಅನುಮಾನಗಳನ್ನು ದೂರ ಮಾಡುವುದು ಸರಕಾರದ ಜವಾಬ್ಧಾರಿ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿ ರಾಜ್ಯದ ಗೃಹ ಸಚಿವರ ಹೇಳಿಕೆ, ಕೇಂದ್ರ ಸಚಿವರ ಹೇಳಿಕೆ ಅತ್ಯಂತ ಬೇಜವಾಬ್ದಾರಿಯಿಂದ ಕೂಡಿತ್ತು. ಅವರು ಕ್ಷಮೆಯಾಚಿಸಬೇಕು ಎಂದರು.

ಕೇರಳದಿಂದ ಬಂದವರು, ಇಸ್ಲಾಮಿಕ್ ಉಗ್ರ, ಸಿಎಎ ಕಾಯ್ದೆಗೆ ಪ್ರತೀಕಾರ ಎಂಬಂತೆಲ್ಲಾ ಪ್ರಕರಣವನ್ನು ಬಿಂಬಿಸಲಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವವರು ಈ ಬಗ್ಗೆ ಹೇಳಿಕೆಗಳನ್ನು ನೀಡಿದ್ದಾರೆ. ಪ್ರಕರಣದ ಆರೋಪಿ ಸಿಕ್ಕಿಲ್ಲವಾಗಿದ್ದಲ್ಲಿ, ಯಾರ್ಯಾರದೋ ಹೆಸರು ಕೇಳಿ ಬರುತ್ತಿತ್ತು ಎಂದವರು ಹೇಳಿದರು.

ಪ್ರಹಸನ ಅಲ್ಲ ಎಂಬುದನ್ನು ಸರಕಾರ ಸಾಬೀತುಪಡಿಸಲಿ

ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ, ಅವರು ಮಾಜಿ ಮುಖ್ಯಮಂತ್ರಿ, ಗೃಹ ಇಲಾಖೆಯೂ ಅವರ ಅಧೀನದಲ್ಲಿದ್ದು ಕರ್ತವ್ಯ ನಿರ್ವಹಿಸಿದವರು. ಅವರದ್ದೇ ಆದ ಮೂಲದ ಆಧಾರದಲ್ಲಿ ಅವರು ಹೇಳಿಕೆ ನೀಡಿದ್ದಾರೆ. ಅವರು ಹೇಳಿರುವಂತೆ ಅದೊಂದು ಪ್ರಹಸನ ಅಲ್ಲ ಎಂಬ ಬಗ್ಗೆ ಸರಕಾರ ಸಾಬೀತು ಪಡಿಸಲಿ ಎಂದು ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.

ಪ್ರಕರಣದ ಆರೋಪಿ ಆರಾಮವಾಗಿ ವಿಮಾನ ನಿಲ್ದಾಣಕ್ಕೆ ಬಂದು ಸ್ಪೋಟಕ ಇರಿಸಿ, ಅಲ್ಲಿಂದ ಬೆಂಗಳೂರು ತಲುಪುವವರೆಗೂ ಆತನನ್ನು ಬಂಧಿಸಲು ಸಾಧ್ಯವಾಗಿಲ್ಲ ಎಂಬುದು ಗುಪ್ತಚರ ಇಲಾಖೆಯ ವೈಫಲ್ಯ. ಭದ್ರತೆಗಾಗಿ ಅಷ್ಟೊಂದು ವ್ಯವಸ್ಥೆಗಳ ಹೊರತಾಗಿಯೂ, ಸಮರ್ಪಕ ಶ್ವಾನದಳದ ಹೊರತಾಗಿಯೂ ಆರೋಪಿ ಪೊಲೀಸರೆದುರು ಶರಣಾಗುವವರೆಗೆ ಆತನನ್ನು ಬಂಧಿಸಲು ಸಾಧ್ಯವಾಗದಿರುವುದು ರಾಜ್ಯ ಸರಕಾರ ಸಂಪೂರ್ಣ ನಿಷ್ಕ್ರಿಯವಾಗಿರುವುದಕ್ಕೆ ಸಾಕ್ಷಿ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News