ಕೇರಳಿಗರ ಆಕ್ರೋಶಕ್ಕೆ ಮಣಿದ ರೈಲ್ವೆ: ಬಾಳೆ ಹಣ್ಣು ಬಜ್ಜಿ ಜೊತೆ ಮೀನು ಸಾರು!

Update: 2020-01-22 18:16 GMT
file photo

ಹೊಸದಿಲ್ಲಿ, ಜ. 22: ಕೇರಳದ ಜನಪ್ರಿಯ ತಿಂಡಿಗಳಾದ ಬಾಳೆಹಣ್ಣು ಬಜ್ಜಿ (ಪಯಂಪೊರಿ) ಹಾಗೂ ಎಲೆಕಡುಬು (ಎಲೆಯಡ) ಕಳೆದ ತಿಂಗಳು ರೈಲ್ವೆ ಮೆನುವಿನಿಂದ ಕಾಣೆಯಾಗಿತ್ತು.

ಇದರ ಬದಲು ಉತ್ತರ ಭಾರತದ ತಿಂಡಿಗಳಾದ ಸಮೋಸಾ ಹಾಗೂ ಕಚೋರಿ ಸ್ಥಾನ ಪಡೆದುಕೊಂಡಿತ್ತು. ಆದರೆ, ಇದಕ್ಕೆ ಕೇರಳಿಯರು ಸುಮ್ಮನೆ ಕೂರಲಿಲ್ಲ. ತಮ್ಮ ನೆಚ್ಚಿನ ತಿಂಡಿಗಳು ಮೆನುವಿನಿಂದ ಕಾಣೆಯಾದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಧ್ವನಿ ಎತ್ತಿದ್ದರು. ‘‘ಬಾಳೆಹಣ್ಣು ಬಜ್ಜಿಯನ್ನು ನೀವು ಮೆನುವಿನಿಂದ ಹೇಗೆ ತೆಗೆದಿರಿ, ರೈಲು ಪ್ರಯಾಣದ ಸಂದರ್ಭ ಇದು ನನ್ನ ಪ್ರಧಾನ ತಿಂಡಿಯಾಗಿತ್ತು’’ ಎಂದು ಅಸಮಾಧಾನಗೊಂಡ ಪ್ರಯಾಣಿಕರೋರ್ವರು ಬರೆದಿದ್ದಾರೆ. ಇದು ‘ಸಾಂಸ್ಕೃತಿಕ ಫ್ಯಾಸಿಸಂ’ ಎಂದು ಇನ್ನೋರ್ವ ಪ್ರಯಾಣಿಕರು ಟೀಕಿಸಿದ್ದಾರೆ. ಈ ಸ್ಥಳೀಯ ತಿಂಡಿಗಳನ್ನು ಮತ್ತೆ ಮೆನುವಿನಲ್ಲಿ ಸೇರಿಸುವಂತೆ ಎರ್ನಾಕುಳಂನ ಸಂಸದ ಹಿಪಿ ಈಡನ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದಿದ್ದರು. ಆಪ, ಮೊಟ್ಟೆ ಸಾರು, ಪರೋಟಾ, ದೋಸೆ, ಚಪಾತಿ, ಪುಟ್ಟು, ಬಾಳೆಹಣ್ಣು ಬಜ್ಜಿ, ಬಾಜಿ ಎಲೆಕಡುಬು, ನೈಯಪ್ಪ ಮೊದಲಾದ ಮಲೆಯಾಳಿಗಳ ಬೆಳಗ್ಗಿನ ಉಪಹಾರದ ಪ್ರಮುಖ ತಿಂಡಿಗಳನ್ನು ಹಾಗೂ ಲಿಂಬೆ ಶರಬತ್ ಅನ್ನು ಮೆನುವಿನಿಂದ ಕೈ ಬಿಡಲಾಗಿದೆ ಎಂದು ಈಡನ್ ಪತ್ರದಲ್ಲಿ ಹೇಳಿದ್ದರು.

ಪಿಯೂಷ್ ಗೋಯಲ್ ಹಾಗೂ ರೈಲ್ವೆ ಪ್ರಯಾಣಿಕರ ಪ್ರತಿಕ್ರಿಯೆ ಗಮನಿಸಿ ಭಾರತೀಯ ರೈಲ್ವೆಯ ಅಂಗಸಂಸ್ಥೆಯಾಗಿರುವ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ರೆಸ್ಟೋರೆಂಟ್‌ಗಳನ್ನು ನಡೆಸುತ್ತಿರುವ ಭಾರತೀಯ ರೈಲ್ವೆಯ ಕ್ಯಾಟರಿಂಗ್ ಹಾಗೂ ಪ್ರವಾಸೋದ್ಯಮ ನಿಗಮ ಪ್ರಾದೇಶಿಕ ಆದ್ಯತೆಯಂತೆ ಬಾಳೆಹಣ್ಣು ಬಜ್ಜಿ ಹಾಗೂ ಎಲೆಕಡುಬುಗೆ ಮೆನುವಿನಲ್ಲಿ ಮತ್ತೆ ಸ್ಥಾನ ಕಲ್ಪಿಸಿದೆ. ಅಲ್ಲದೆ, ಮೀನು ಸಾರು ಸೇರಿಸಿ ಮೆನುವನ್ನು ಪರಿಷ್ಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News