ರೋಹಿಂಗ್ಯಾ ಮುಸ್ಲಿಮರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ ಮ್ಯಾನ್ಮಾರ್ ಗೆ ಆದೇಶಿಸಿದ ಅಂತರ್ ರಾಷ್ಟ್ರೀಯ ನ್ಯಾಯಾಲಯ

Update: 2020-01-23 15:38 GMT

ಮ್ಯಾನ್ಮಾರ್,ಜ.23: ಅಮಾನವೀಯ ದೌರ್ಜನ್ಯಕ್ಕೊಳಗಾದ ರೋಹಿಂಗ್ಯಾ ಮುಸ್ಲಿಂ ಸಮುದಾಯವನ್ನು ರಕ್ಷಿಸಲು ತಕ್ಷಣವೇ ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಂತಾರಾಷ್ಟ್ರೀಯ ನ್ಯಾಯಾಲಯವು ಗುರುವಾರ ಆದೇಶ ನೀಡಿದೆ. ಮ್ಯಾನ್ಮಾರ್‌ನಲ್ಲಿ ರೋಹಿಂಗ್ಯಾಗಳ ನರಮೇಧ ನಡೆದಿದೆಯೆಂಬ ಆರೋಪಗಳ ಬಗ್ಗೆ ತನಿಖೆ ನಡೆಸುವ ಅಧಿಕಾರ ವ್ಯಾಪ್ತಿಯನ್ನು ತಾನು ಹೊಂದಿರುವುದಾಗಿ ಅದು ಸ್ಪಷ್ಟಪಡಿಸಿದೆ.

ಮ್ಯಾನ್ಮಾರ್‌ನ ರೋಹಿಂಗ್ಯಾ ಮುಸ್ಲಿಮರು ಅತ್ಯಂತ ದುರ್ಬಲರಾಗಿಯೇ ಉಳಿದುಕೊಂಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಗವಾದ ಅಂತಾರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶ ಅಬ್ದುಲ್‌ಖಾವಿ ಅಹ್ಮದ್ ಯೂಸುಫ್ ಕಳವಳ ವ್ಯಕ್ತಪಡಿಸಿದರು.ರೋಹಿಂಗ್ಯಾಗಳ ವಿರುದ್ಧ ದೌರ್ಜನ್ಯ ತಡೆಗಟ್ಟಲು ತಾತ್ಕಾಲಿಕ ಕ್ರಮಗಳನ್ನು ಕೈಗೊಳ್ಳಬೇಕೆಂಬ ತನ್ನ ಆದೇದಿಂದಾಗಿ ಮ್ಯಾನ್ಮಾರ್‌ಗೆ ಅಂತಾರಾಷ್ಟ್ರೀಯ ಕಾನೂನು ಬಾಧ್ಯತೆಗಳು ಸೃಷ್ಟಿಯಾಗಲಿವೆಯೆಂದು ನ್ಯಾಯಾಲಯ ತಿಳಿಸಿದೆ.

ತನ್ನ ಆದೇಶಕ್ಕೆ ಅನುಗುಣವಾಗಿ ರೊಹಿಂಗ್ಯಾಗಳ ರಕ್ಷಣೆಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ನಾಲ್ಕು ತಿಂಗಳೊಳಗೆ ವರದಿ ಸಲ್ಲಿಸುವಂತೆಯೂ ಐಸಿಜೆ ಮ್ಯಾನ್ಮಾರ್‌ಗೆ ಆದೇಶಿಸಿದೆ.

ಮ್ಯಾನ್ಮಾರ್‌ನಲ್ಲಿ ಅಲ್ಪಸಂಖ್ಯಾತ ರೋಹಿಂಗ್ಯಾ ಮುಸ್ಲಿಮರ ನರಮೇಧ ನಡೆಯುತ್ತಿದೆಯೆಂದು ಆರೋಪಿಸಿ ಗಾಂಬಿಯಾ ದೇಶವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕಳೆದ ನವೆಂಬರ್‌ನಲ್ಲಿ ದೂರು ನೀಡಿತ್ತು. ಮ್ಯಾನ್ಮಾರ್‌ನ ನರಮೇಧಕಾರಿ ವರ್ತನೆಯನ್ನು ನಿಲ್ಲಿಸಲು ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಗಾಂಬಿಯಾ ದೇಶವು ಅಂತಾರಾಷ್ಟ್ರೀಯ ನ್ಯಾಯಾಲಯವನ್ನು ಕೋರಿತ್ತು. ಗಾಂಬಿಯಾದ ಮೊಕದ್ದಮೆಯನ್ನು ಇಸ್ಲಾಮಿಕ್ ಸಹಕಾರ ಒಕ್ಕೂಟದ 57 ಸದಸ್ಯ ರಾಷ್ಟ್ರಗಳು ಹಾಗೂ ಕೆನಡ ಮತ್ತು ನೆದರ್‌ಲ್ಯಾಂಡ್ಸ್ ಬೆಂಬಲಿಸಿದ್ದವು.

 ಮ್ಯಾನ್ಮಾರ್‌ನ ನಾಯಕಿ ಆಂಗ್‌ಸಾನ್ ಸೂಕಿ ಕಳೆದ ಡಿಸೆಂಬರ್‌ನಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯದ ಕಚೇರಿಯಿರುವ ಹೇಗ್‌ಗೆ ತೆರಳಿ, ರೋಹಿಂಗ್ಯಾಗಳ ವಿರುದ್ಧದ ನಡೆದಿದೆಯೆನ್ನಲಾದ ದೌರ್ಜನ್ಯ ಪ್ರಕರಣಗಳ ತನಿಖೆಗೆ ತನ್ನ ದೇಶದ ನ್ಯಾಯಾಲಯಗಳು ಸಮರ್ಥವಾಗಿವೆ. ಇದರಲ್ಲಿ ಅಂತಾರಾಷ್ಟ್ರೀಯ ನ್ಯಾಯಾಲಯ ಮಧ್ಯಪ್ರವೇಶಿಸುವ ಅಗತ್ಯವಿಲ್ಲವೆಂದು ಹೇಳಿದ್ದರು.

 ಗಾಂಬಿಯಾ ಹಾಗೂ ಮ್ಯಾನ್ಮಾರ್ ದೇಶಗಳೆರಡೂ 1948ರ ನರಮೇಧ ವಿರೋಧಿ ಒಡಂಬಡಿಕೆಗೆ ಸಹಿಹಾಕಿದ ರಾಷ್ಟ್ರಗಳಾಗಿವೆ. ಈ ಒಡಂಬಡಿಯು ಆಡಳಿತಗಳು ನರಮೇಧ ಎಸಗುವುದನ್ನು ನಿಷೇಧಿಸುತ್ತದೆ ಹಾಗೂ ಸಹಿಹಾಕಿದ ಎಲ್ಲಾ ರಾಷ್ಟ್ರಗಳು ನರಮೇಧವನ್ನು ತಡೆಗಟ್ಟುವುದನ್ನು ಹಾಗೂ ಆ ಅಪರಾಧ ಎಸಗಿದವರನ್ನು ಶಿಕ್ಷಿಸುವುದನ್ನು ಕಡ್ಡಾಯಗೊಳಿಸಿದೆ.

2017ರ ಆಗಸ್ಟ್‌ನಲ್ಲಿ ರೋಹಿಂಗ್ಯ ಬಂಡುಕೋರರು ಮ್ಯಾನ್ಮಾರ್‌ನ ರಾಖ್ನೆ ಪ್ರಾಂತದಲ್ಲಿ ಪೊಲೀಸ್ ಹೊರಠಾಣೆಗಳ ಮೇಲೆ ದಾಳಿ ನಡೆಸಿದ ಬಳಿಕ ಭದ್ರತಾಪಡೆಗಳು ಅವ್ಯಾಹತವಾಗಿ ನಡೆಸಿದ ಹಿಂಸಾಚಾರದಲ್ಲಿ ಸಾವಿರಾರು ರೋಹಿಂಗ್ಯ ಮುಸ್ಲಿಮರ ನರಮೇಧ ನಡೆಯಿತು ಹಾಗೂ 7 ಲಕ್ಷಕ್ಕೂ ಅಧಿಕ ರೋಹಿಂಗ್ಯ ಮುಸ್ಲಿಮರು ನೆರೆಯ ಬಾಂಗ್ಲಾದೇಶಕ್ಕೆ ಪರಾರಿಯಾಗಿ ಅತಂತ್ರ ಬದುಕನ್ನು ಸಾಗಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News