‘ಸನ್‌ಬರ್ನ್’ ದಾಳಿ ಸಂಚಿನ ಆರೋಪಿ ಪೊಲೀಸ್ ಬಲೆಗೆ

Update: 2020-01-23 14:58 GMT

ಮುಂಬೈ,ಜ.23: 2017ರಲ್ಲಿ ‘ಸನ್‌ಬರ್ನ್’ ಸಂಗೀತ ಉತ್ಸವದ ಮೇಲೆ ದಾಳಿಗೆ ಸಂಚು ನಡೆಸಿದ ಹಾಗೂ ನಲ್ಲಾಸ್‌ಪೋರಾದಲ್ಲಿ ಅಕ್ರಮ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್)ದ ಪೊಲೀಸರು ಗುರುವಾರ ಬಂಧಿಸಿದ್ದಾರೆ.

 ಪಶ್ಚಿಮಬಂಗಾಳದ ನಿವಾಸಿ ಪ್ರತಾಪ್ ಜುಧಿಷ್ಟರ್ ಹಾಜ್ರಾ ಯಾನೆ ಪ್ರತಾಪ್ ಹಾಜ್ರಾ ಬಂಧಿತ ಆರೋಪಿ. ಆತನನ್ನು ಮಹಾರಾಷ್ಟ್ರ ಎಟಿಎಸ್ ತಂಡವು ಪಶ್ಚಿಮಬಂಗಾಳದ 24 ಪರಗಣ ಜಿಲ್ಲೆಯಲ್ಲಿನ ನೈನಾಪುರದಲ್ಲಿ ಬಂಧಿಸಿದೆ.

2017ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಆಯೋಜಿಸಲಾಗಿದ್ದ ಸನ್‌ಬರ್ನ್ ಸಂಗೀತ ಉತ್ಸವದ ಮೇಲೆ ದಾಳಿ ನಡೆಸುವ ಸಂಚನ್ನು ಹಾಜ್ರಾ ನಡೆಸಿದ್ದನೆಂದು ಆರೋಪಿಸಲಾಗಿದೆ. ಆದರೆ ಪೊಲೀಸರು ಸ್ಫೋಟ ಸಂಚನ್ನು ಭೇದಿಸುವಲ್ಲಿ ಸಫಲರಾಗಿದ್ದರು. 2018ರಲ್ಲಿ ಪ.ಬಂಗಾಳದ ನಲ್ಲಾಸ್‌ಪೋರಾದಲ್ಲಿ ಅಕ್ರಮ ಶಸ್ತ್ರಾಸ್ತ್ರ ದಾಸ್ತಾನು ಪ್ರಕರಣದಲ್ಲಯೂ ಆತ ಪೊಲೀಸರಿಗೆ ಬೇಕಾಗಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಹಾಜ್ರಾನನ್ನು ಇಂದು ಮುಂಬೈನ ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನಾಯಾಧೀಶರು ಆತನನ್ನು ಮೇ 30ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News