ಮಂಗಳೂರು ಸ್ಫೋಟಕ ಪ್ರಕರಣ: ಗೃಹ ಸಚಿವರ ರಾಜೀನಾಮೆಗೆ ಎಸ್‌ಡಿಪಿಐ ಆಗ್ರಹ

Update: 2020-01-23 15:18 GMT

ಮಂಗಳೂರು, ಜ. 23: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯರಾವ್ ಬಗ್ಗೆ ರಾಜ್ಯ ಗೃಹ ಸಚಿವ ಬಸವರಾಹ ಬೊಮ್ಮಾಯಿ ‘ಮಾನಸಿಕ ಅಸ್ವಸ್ಥ’ ಎನ್ನುವ ಬೇಜವಾಬ್ದಾರಿಯುತ ಹೇಳಿಕೆ ನೀಡಿ ಪ್ರಕರಣದ ದಿಕ್ಕು ತಪ್ಪಿಸಲು ಯತ್ನಿಸಿದ್ದಾರೆ. ಬೊಮ್ಮಾಯಿ ಗೃಹ ಸಚಿವ ಸ್ಥಾನಕ್ಕೆ ಅನರ್ಹರಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಎಸ್‌ಡಿಪಿಐ ರಾಜ್ಯ ಸಮಿತಿಯ ಸದಸ್ಯ ಹಾರಿಸ್ ಮಡಿಕೇರಿ ಆಗ್ರಹಿಸಿದ್ದಾರೆ.

ನಗರದ ಮಿನಿ ವಿಧಾನಸೌಧ ಸಮೀಪ ಗುರುವಾರ ಸಂಜೆ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ‘ಪ್ರಕರಣವು ಸುದ್ದಿಯಾದ ತಕ್ಷಣ ಟಿವಿ ಮಾಧ್ಯಮಗಳು, ಪತ್ರಿಕೆಗಳು ಆಕ್ಷೇಪಕಾರಿ ಹಾಗೂ ಕೋಮುದ್ವೇಷ ಪ್ರಚೋದನೆಯ ವಿಷಯಗಳನ್ನು ಪ್ರಸಾರ ಮಾಡಿವೆ. ಇದು ಅತ್ಯಂತ ಖಂಡನೀಯ ಹಾಗೂ ಅಕ್ಷಮ್ಯ ಅಪರಾಧವಾಗಿದೆ’ ಎಂದು ಖಂಡಿಸಿದರು.

‘ಈ ಹಿಂದೆಯೂ ಇಂತಹದ್ದೇ ಪ್ರಕರಣಗಳು ಬೆಳಕಿಗೆ ಬಂದ ಆರೋಪಿ ಮುಸ್ಲಿಮೇತರನಾಗಿದ್ದರೆ ಆತನನ್ನು ಮಾನಸಿಕ ಅಸ್ವಸ್ಥ ವೆನ್ನುವುದು ಹಾಗೂ ಆರೋಪಿಗಳು ಯಾರು ಎನ್ನುವುದು ತಿಳಿಯುವುದಕ್ಕಿಂತ ಮುಂಚಿತವಾಗಿಯೇ ಇಸ್ಲಾಂ ಉಗ್ರರು, ಮುಸ್ಲಿಮ್ ಭಯೋತ್ಪಾದಕರು ಎನ್ನುವ ಕೆಲ ಮಾಧ್ಯಮಗಳ ಚಾಳಿ ಸಮಾಜದ ಸ್ವಾಸ್ಥ, ಸೌರ್ಹಾದಕ್ಕೆ ಮಾರಕ’ ಎಂದು ಅವರು ಎಚ್ಚರಿಕೆ ನೀಡಿದರು.

‘ಶಂಕಿತ ಉಗ್ರ ‘ಆದಿತ್ಯ ರಾವ್‌‘ ಎಂದು ತಿಳಿದಾಕ್ಷಣ ಸುದ್ದಿವಾಹಿನಿಗಳು, ಪತ್ರಿಕೆಗಳು ರಾಗ ಬದಲಿಸಿದ್ದು ಅದು ಪಟಾಕಿಯೆಂದೂ, ಆತನು ಮಾನಸಿಕ ಅಸ್ವಸ್ಥನೆಂದೂ ವರ್ಣಿಸಿವೆ. ಆದಿತ್ಯರಾವ್‌ಗಾಗಿ ಉಡುಪಿ, ಮಂಗಳೂರು, ಮಣಿಪಾಲ ವಿವಿಧೆಡೆ ಜಾಲಾಡಿದ ಪೊಲೀಸರಿಗೆ ಆತನನ್ನು ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಆದಿತ್ಯರಾವ್ ಬೆಂಗಳೂರಿಗೆ ತೆರಳಿ ಪೊಲೀಸರ ಮುಂದೆ ಶರಣಾಗಿರುವುದು ಪ್ರಕರಣದ ಹಿಂದೆ ಕಾಣದ ಕೈಗಳ ಕೈವಾಡ ಇದೆ’ ಎಂದು ಶಂಕೆ ವ್ಯಕ್ತಪಡಿಸಿದರು.

‘ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇರಿಸಿದ್ದ ಕೃತ್ಯದ ಹಿಂದೆ ಯಾವ ಭಯೋತ್ಪಾದಕ ಶಕ್ತಿ ಇದೆ? ಅದರ ಸೂತ್ರಧಾರರು ಯಾರು ? ಕೆಲ ಮಾಧ್ಯಮಗಳ ಭಯೋತ್ಪಾದನಾ ಮನೋಭಾವವನ್ನು ಕಠಿಣ ತನಿಖೆಗೊಳಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಸದಸ್ಯ ಮುನೀಬ್ ಬೆಂಗ್ರೆ, ಎಸ್‌ಡಿಪಿಐ ಮಂಗಳೂರು ದಕ್ಷಿಣ ಕ್ಷೇತ್ರದ ಅಧ್ಯಕ್ಷ ಸುಹೈಲ್ ಖಾನ್, ಉಪಾಧ್ಯಕ್ಷ ಸಾದಿಕ್ ಬೆಂಗ್ರೆ, ಸದಸ್ಯರಾದ ಶರೀಫ್ ಪಾಂಡೇಶ್ವರ, ಇಕ್ಬಾಲ್ ಕಣ್ಣೂರು ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News