ಮುಸ್ಲಿಂ ಸೆಂಟ್ರಲ್ ಕಮಿಟಿಯ ವಿರುದ್ಧ ಅಪಪ್ರಚಾರ ಬೇಡ: ಮುಹಮ್ಮದ್ ಮಸೂದ್ ಮನವಿ

Update: 2020-01-23 16:05 GMT

ಮಂಗಳೂರು, ಜ.23: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಡಿ.19ರಂದು ಮಂಗಳೂರಿನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ಸಂಭವಿಸಿದ ಹಿಂಸಾಚಾರದ ಬಳಿಕ ಸಮುದಾಯದ ಹಿತಕ್ಕಾಗಿ ಮುಸ್ಲಿಂ ಸೆಂಟ್ರಲ್ ಕಮಿಟಿಯು ಸಾಕಷ್ಟು ಕೆಲಸ ಮಾಡಿದೆ. ಆದರೆ ವಾಸ್ತವಾಂಶ ತಿಳಿದುಕೊಳ್ಳದೆ ಕಮಿಟಿಯ ವಿರುದ್ಧ ಯಾರೂ ಅಪಪ್ರಚಾರ ಮಾಡುವುದು ಬೇಡ ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಹಾಜಿ ಕೆಎಸ್ ಮುಹಮ್ಮದ್ ಮಸೂದ್ ಮನವಿ ಮಾಡಿದ್ದಾರೆ.

ಗೋಲಿಬಾರ್‌ನಿಂದ ಮೃತಪಟ್ಟ ಇಬ್ಬರ ಕುಟುಂಬಕ್ಕೆ ಸಹಾಯಧನ ನೀಡಲಾಗಿದೆ. ಗುಂಡೇಟು, ಕಲ್ಲೇಟಿನಿಂದ ಗಾಯಗೊಂಡವರ ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭರಿಸಲಾಗಿದೆ. ಗಾಯಗೊಂಡವರ ಪೈಕಿ ಹಲವರಿಗೆ ಮಾಸಿಕ ಪಡಿತರ ಸಾಮಗ್ರಿ ನೀಡಲಾಗಿದೆ. ಜೈಲು ಸೇರಿರುವ ಅಮಾಯಕರ ಪೈಕಿ ಕೆಲವರ ಮನೆಗೂ ಪಡಿತರ ಸಾಮಗ್ರಿ ವಿತರಿಸಲಾಗಿದೆ. ಕಾನೂನು ಹೋರಾಟಕ್ಕೆ ಸಂಬಂಧಿಸಿ ನೆರವು ನೀಡಲಾಗಿದೆ. ಅಲ್ಲದೆ ಸಮಾನ ಮನಸ್ಕ 25ಕ್ಕೂ ಅಧಿಕ ಸಂಘಟನೆಗಳ ಸಹಕಾರದಿಂದ ಜ.15ರಂದು ಅಡ್ಯಾರ್ ಕಣ್ಣೂರಿನಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಆಯೋಜಿಸಿ ಯಶಸ್ವಿಯಾಗಿದ್ದೆವು. ಈ ಸಂದರ್ಭ ಕೆಲವು ಸಣ್ಣಪುಟ್ಟ ತಪ್ಪುಗಳಾಗಿರಬಹುದು. ದೊಡ್ಡ ದೊಡ್ಡ ಕಾರ್ಯಕ್ರಮ ಆಯೋಜಿಸುವಾಗ ಸಣ್ಣಪುಟ್ಟ ತಪ್ಪುಗಳಾಗು ವುದು ಸಹಜ. ಅದನ್ನೇ ಮುಂದಿಟ್ಟುಕೊಂಡು ಮುಸ್ಲಿಂ ಸೆಂಟ್ರಲ್ ಕಮಿಟಿಯ ವಿರುದ್ಧ ಅಪಪ್ರಚಾರ ಮಾಡುತ್ತಿರುವುದು ಸರಿಯಲ್ಲ ಎಂದು ಮಸೂದ್ ತಿಳಿಸಿದ್ದಾರೆ.

ನನ್ನ ಹಾಗೂ ಉಪಾಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ನಿಂದಿಸಲಾಗಿದೆ. ಇದರಿಂದ ನಮಗೆ ತುಂಬಾ ನೋವಾಗಿದೆ. ಈ ಇಳಿವಯಸ್ಸಿನಲ್ಲಿ ನಾವು ಸಮುದಾಯದ ಹಿತಕ್ಕಾಗಿ ಶ್ರಮಿಸುತ್ತಿದ್ದೇವೆಯೇ ವಿನಃ ವೈಯಕ್ತಿಕ ಆಸೆಗಲ್ಲ ಎಂಬುದನ್ನು ನಿಂದಕರು ತಿಳಿದುಕೊಳ್ಳಬೇಕಿದೆ. ಕಾರ್ಯಕ್ರಮ ಆಯೋಜಿಸುವಾಗ, ಸಮಸ್ಯೆ-ಸವಾಲುಗಳನ್ನು ಎದುರಿಸುವಾಗ ಸಾಕಷ್ಟು ಎಚ್ಚರಿಕೆ ಮತ್ತು ತಾಳ್ಮೆ ವಹಿಸಬೇಕಾಗುತ್ತದೆ. ಸಮಾಜದಲ್ಲಿ ಶಾಂತಿ ನೆಲೆಸಲು ಇಂತಹ ಕೆಲವು ಹೆಜ್ಜೆಗಳನ್ನು ಇಡಬೇಕಾಗುತ್ತದೆ. ಅದೆಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ದೌರ್ಬಲ್ಯ ಅಂತ ತಿಳಿದುಕೊಳ್ಳಬಾರದು ಎಂದು ಮಸೂದ್ ತಿಳಿಸಿದ್ದಾರೆ.

ಕಮಿಟಿಯ ಹೆಸರು ದುರುಪಯೋಗ ಬೇಡ: ಮುಸ್ಲಿಂ ಸೆಂಟ್ರಲ್ ಕಮಿಟಿಯ ಹೆಸರು ಹೇಳಿಕೊಂಡು ಮಂಗಳೂರು ಗಲಭೆಗೆ ಸಂಬಂಧಿಸಿದಂತೆ ಕೆಲವು ಮಂದಿ ವಿದೇಶದಲ್ಲಿ ಹಾಗೂ ಜಿಲ್ಲೆಯಲ್ಲಿ ಮನೆ ಮನೆಗೆ ತೆರಳಿ ಮತ್ತು ಮಸೀದಿಗಳಲ್ಲಿ ಹಣ ಸಂಗ್ರಹಿಸುವ ಬಗ್ಗೆ ಮಾಹಿತಿ ಇದೆ. ಸೆಂಟ್ರಲ್ ಕಮಿಟಿಯು ಹಣ ಸಂಗ್ರಹಕ್ಕಾಗಿ ಯಾರನ್ನೂ ನೇಮಿಸಿಲ್ಲ. ಈ ಬಗ್ಗೆ ಜನರು ಜಾಗರೂಕ ರಾಗಿರಬೇಕು ಎಂದು ಮಸೂದ್ ಮನವಿ ಮಾಡಿದ್ದಾರೆ.

ದೂರು ದಾಖಲು: ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಮುಹಮ್ಮದ್ ಮಸೂದ್ ಮತ್ತು ಉಪಾಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ನಿಂದಿಸಿದ ಬಗ್ಗೆ ಕಮಿಟಿಯ ಕಾರ್ಯಕಾರಿ ಸಮಿತಿಯ ಸದಸ್ಯ ಆಬಿದ್ ಜಲೀಹಾಲ್ ಕುದ್ರೋಳಿ ಬಂದರು ಠಾಣೆಗೆ ಜ.21ರಂದು ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News