ಎಬಿವಿಪಿ ಬೆದರಿಕೆ ಹಿನ್ನೆಲೆಯಲ್ಲಿ ಚರ್ಚಾಗೋಷ್ಠಿ ರದ್ದುಗೊಳಿಸಿದ ಎಸ್‌ಆರ್‌ಸಿಸಿ

Update: 2020-01-23 16:13 GMT

ಹೊಸದಿಲ್ಲಿ, ಜ. 23: ಪ್ರತಿಭಟನೆ ನಡೆಸುವುದಾಗಿ ಎಬಿವಿಪಿ ವಿದ್ಯಾರ್ಥಿಗಳು ಬೆದರಿಕೆ ಒಡ್ಡಿದ ಹಿನ್ನೆಲೆಯಲ್ಲಿ ದಿಲ್ಲಿ ವಿಶ್ವವಿದ್ಯಾನಿಲಯದ ಶ್ರೀರಾಮ್ ಕಾಲೇಜ್ ಆಫ್ ಕಾಮರ್ಸ್‌ನಲ್ಲಿ ಗುರುವಾರ ಆಯೋಜಿಸಲಾಗಿದ್ದ ‘ಪೌರತ್ವ ಕಾಯ್ದೆ ವಿರುದ್ಧ ಈಶಾನ್ಯದಲ್ಲಿ ಪ್ರತಿಭಟನೆ ಯಾಕೆ?’ ಎಂಬ ವಿಷಯದ ಕುರಿತ ಚರ್ಚಾಗೋಷ್ಠಿಯನ್ನು ರದ್ದುಗೊಳಿಸಲಾಯಿತು. ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಕೆಲವು ಗಂಟೆಗಳ ಮುನ್ನ ತುರ್ತು ಸಭೆ (ಸೆಲ್‌ನ ಕೆಲವು ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ)ನಡೆಸಲಾಯಿತು. ಸಮಸ್ಯೆ ಉದ್ಭವಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಗೊಳಿಸಲಾಗಿದೆ ಎಂದು ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ನಮಗೆ ಮಾಹಿತಿ ನೀಡಿದರು ಎಂದು ಕಾರ್ಯಕ್ರಮ ಆಯೋಜಿಸಿದ ಕಾಲೇಜಿನ ಈಶಾನ್ಯ ವಿದ್ಯಾರ್ಥಿಗಳ ಸೆಲ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ.

ಕಾರ್ಯಕ್ರಮ ನಡೆದರೆ, ಕ್ಯಾಂಪಸ್‌ನಲ್ಲಿ ಹಿಂಸಾಚಾರ ಸಂಭವಿಸುವ ಸಾಧ್ಯತೆ ಇದೆ ಎಂಬ ಬಗ್ಗೆ ಮಾಹಿತಿ ಸ್ವೀಕರಿಸಲಾಗಿದೆ ಎಂದು ನಮಗೆ ಹೇಳಲಾಗಿತ್ತು. ನಮ್ಮ ಸಮಿತಿಯಲ್ಲಿ ಯಾವುದೇ ಸಮತೋಲನ ಇಲ್ಲ ಹಾಗೂ ಎಲ್ಲ ಭಾಷಣಕಾರರು ಒಂದೇ ಸಿದ್ಧಾಂತದ ಹಿನ್ನೆಲೆಯವರು ಎಂದು ನಮಗೆ ತಿಳಿಸಲಾಗಿತ್ತು ಎಂದು ಹೇಳಿಕೆ ತಿಳಿಸಿದೆ. ‘‘ಇದು ರಾಜಕೀಯ ಪ್ರೇರಿತ ಕಾರ್ಯಕ್ರಮ ಅಲ್ಲ. ಕಾಲೇಜಿನಲ್ಲಿ ಈಶಾನ್ಯ ರಾಜ್ಯಗಳಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಬಗ್ಗೆ ಸಂಪೂರ್ಣ ಜಾಗೃತಿ ಕೊರತೆ ಇರುವುದರಿಂದ ಈ ಚರ್ಚಾಗೋಷ್ಠಿ ಆಯೋಜಿಸಲಾಗಿತ್ತು. ಅಪಾರ ಬೆಂಬಲ ಗಳಿಸಿದ ಈ ಚರ್ಚೆ ಇಂದಿನ ಅವಶ್ಯಕತೆ. ಕ್ಯಾಂಪಸ್‌ನಿಂದ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಈ ಚರ್ಚಾಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ನಾವು ನಿರೀಕ್ಷಿಸಿದ್ದೆವು’’ ಎಂದು ಈಶಾನ್ಯ ರಾಜ್ಯಗಳ ವಿದ್ಯಾರ್ಥಿಗಳ ಸೆಲ್‌ನ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News