ತೆಂಗಿನಮರದಿಂದ ಬಿದ್ದು ಯುವಕ ಮೃತ್ಯು

Update: 2020-01-23 16:15 GMT

ಬ್ರಹ್ಮಾವರ, ಜ.23: ತೆಂಗಿನಮರದಿಂದ ಕಾಯಿ ಕೀಳುತ್ತಿರುವಾಗ ಯುವಕನೊಬ್ಬ ಆಯ ತಪ್ಪಿ ಬಿದ್ದು, ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಇಂದು ಬೆಳಗ್ಗೆ 9 ಗಂಟೆ ಸುಮಾರಿಗೆ ನೀಲಾವರ ಗ್ರಾಮದ ನಂದನಕುದ್ರು ಎಂಬಲ್ಲಿಂದ ವರದಿಯಾಗಿದೆ.

ಮೃತ ಯುವಕನನ್ನು ಯಡ್ತಾಡಿ ಗ್ರಾಮ ಅಲ್ತಾರು ಕೇದಿಕೆರೆಯ ಸುರೇಶ್ (30) ಎಂದು ಗುರುತಿಸಲಾಗಿದೆ.

ಕೃಷಿ ಹಾಗೂ ಅದಕ್ಕೆ ಸಂಬಂಧಿಸಿದ ಕೂಲಿ ಕೆಲಸಗಳನ್ನು ಮಾಡುತಿದ್ದ ಸುರೇಶ್, ವಿಜಯ ಮತ್ತು ರವಿ ಎಂಬವರ ಜೊತೆಗೆ ಇಂದು ಬೆಳಗ್ಗೆ ನೀಲಾವರ ಗ್ರಾಮದ ನಂದನಕುದ್ರು ಎಂಬಲ್ಲಿರುವ ತೋಟದ ತೆಂಗಿನಕಾಯಿ ತೆಗೆಯಲು ಆಗಮಿಸಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ ಮರದಿಂದ ಕಾಯಿ ಕೊಯ್ಯುತಿದ್ದಾಗ ಆಯತಪ್ಪಿ ತಲೆ ಕೆಳಗಾಗಿ ಬಿದ್ದು ಮುಖ ಹಾಗೂ ಎದೆಗೆ ತೀವ್ರವಾಗಿ ಪೆಟ್ಟು ಮಾಡಿಕೊಂಡಿದ್ದರು. ಕೂಡಲೇ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರೂ ಅಲ್ಲಿಗೆ ತಲುಪುವಾಗದೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು.

ಈ ಬಗ್ಗೆ ಮೃತರ ಅಣ್ಣ ಸಂತೋಷ್ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದು, ಅದರಲ್ಲಿ ಯಾವುದೇ ಮುಂಜಾಗ್ರತಾ ಕ್ರಮ ಹಾಗೂ ಸುರಕ್ಷತಾ ಕ್ರಮಗಳನ್ನು ಅಳವಡಿಸದ ತೋಟದ ಮಾಲಕರ ನಿರ್ಲಕ್ಷದಿಂದ ಈ ದುರ್ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News