ಕೆಎಂಸಿ: ಮಕ್ಕಳು, ನವಜಾತ ಶಿಶುಗಳ 100 ಯಶಸ್ವಿ ಹೃದಯ ಶಸ್ತ್ರಚಿಕಿತ್ಸೆ

Update: 2020-01-23 16:19 GMT

ಉಡುಪಿ, ಜ. 23: ಕೇವಲ ಎರಡು ವರ್ಷಗಳ ಹಿಂದೆ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಪ್ರಾರಂಭಗೊಂಡ ಮಕ್ಕಳ ಹೃದಯ ಮತ್ತು ಹೃದಯ ಶಸ್ತ್ರಚಿಕಿತ್ಸೆ ಯಲ್ಲಿ ಈವರೆಗೆ 100ಕ್ಕೂ ಅಧಿಕ ಮಕ್ಕಳ ಹೃದಯ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಮಕ್ಕಳ ಹೃದಯ ಚಿಕಿತ್ಸಾ ತಜ್ಞ ಹಾಗೂ ಆಸ್ಪತ್ರೆಯ ಹೃದಯ ರಕ್ತನಾಳ ಮತ್ತು ಎದೆಗೂಡಿನ ಶಸ್ತ್ರಚಿಕಿತ್ಸಾ ಪ್ರಾಧ್ಯಾಪ್ಯಕ ಡಾ.ಅರವಿಂದ ಕುಮಾರ್ ಬಿಶ್ನೋಯ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಇದುವರೆಗೆ ಮಕ್ಕಳ ಹಾಗೂ ನವಜಾತ ಶಿಶುಗಳ ಹೃದಯಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗೆ ಮುಂಬೈ ಅಥವಾ ಕೊಚ್ಚಿನ್‌ಗೆ ಹೋಗಬೇಕಾದ ಹೆತ್ತವರಿಗೆ ಈಗ ಮಣಿಪಾಲ ದಲ್ಲೇ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ ಎಂದರು.

ನವಜಾತ ಶಿಶುಗಳು ಹಾಗೂ ಮಕ್ಕಳಲ್ಲಿ ಕಂಡುಬರುವ ಹೃದಯಕ್ಕೆ ಸಂಬಂಧಪಟ್ಟ ಯಾವುದೇ ಕಾಯಿಲೆಗೆ ತ್ವರಿತಗತಿಯಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಗಂಭೀರ ಅನಾರೋಗ್ಯದ ಸ್ಥಿತಿಯಲ್ಲಿ ದೂರದ ಪ್ರಯಾಣ ಅಸಾಧ್ಯವಾಗಿದ್ದು, ಇದೀಗ ಇಂಥ ಮಕ್ಕಳಿಗೆ ಜೀವದಾನ ದೊರೆತಂತಾಗಿದೆ ಎಂದರು.

2018ರಲ್ಲಿ ಇಬ್ಬರು ಮಕ್ಕಳ ಹೃದ್ರೋಗ ತಜ್ಞರು ಹಾಗೂ ಮಕ್ಕಳ ಹೃದಯ ಶಸ್ತ್ರಚಿಕಿತ್ಸಕರೊಂದಿಗೆ ಪ್ರಾರಂಭಗೊಂಡ ಈ ಸೇವೆ 2019ರಲ್ಲಿ 100 ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನಡೆಸಿದೆ. ಕಳೆದೆರಡು ವರ್ಷಗಳಲ್ಲಿ ಅನೇಕ ಸಂಕೀರ್ಣವಾದ ಪ್ರಕರಣ ಗಳನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ ಎಂದು ಅರವಿಂದ ಕುಮಾರ್ ತಿಳಿಸಿದರು.

ಕೆಎಂಸಿಯ ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಮಾತನಾಡಿ, ಮಕ್ಕಳ ವಿಭಾಗ, ಸ್ತ್ರೀರೋಗ ಮತ್ತು ಹೆರಿಗೆ ವಿಭಾಗ, ಭ್ರೂಣ ಔಷಧ ವಿಭಾಗ, ನವಜಾತ ಶಿಶು ವಿಭಾಗ, ವಿಕಿರಣ ಶಾಸ್ತ್ರ ವಿಭಾಗ, ಹೃದಯ ಅರವಳಿಕೆ ವಿಭಾಗ ಹಾಗೂ ಹೃದಯ ಶಸ್ತ್ರಚಿಕಿತ್ಸಾ ವಿಭಾಗದೊಂದಿಗೆ ಪೂರ್ಣಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಲ್ಲದೇ ಈವರೆಗೆ ಶಸ್ತ್ರಚಿಕಿತ್ಸೆ ನಡೆಸಲಾದ 129 ಮಕ್ಕಳ ಪ್ರಕರಣಗಳಲ್ಲಿ 90 ಮಂದಿಗೆ ಸರಕಾರದ ಆಯುಷ್ಮಾನ್ ಭಾರತ ಅಡಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ಇದು ಒಟ್ಟು ಪ್ರಕರಣದ ಶೇ.70 ಆಗಿದೆ ಎಂದರು. ಅಲ್ಲದೇ ನಮ್ಮ ಯಶಸ್ಸಿನ ಪ್ರಮಾಣವೂ ಶೇ.95ಕ್ಕೆ ಮೇಲಿದೆ. ಅಲ್ಲದೇ ಆಸ್ಪತ್ರೆಯ ಹೃದಯ ಶಸ್ತ್ರಚಿಕಿತ್ಸಾ ವಿಭಾಗ ನಡೆಸಿದ 700 ಶಸ್ತ್ರಚಿಕಿತ್ಸೆಯಲ್ಲಿ 300 ಆಯುಷ್ಮಾನ್ ಭಾರತ ಯೋಜನೆಯಡಿ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಡಾ.ಶೆಟ್ಟಿ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ನವಜಾತ ಶಿಶು ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥರಾದ ಡಾ.ಲೆಸ್ಲಿ ಎಡ್ವರ್ಡ್ ಎಸ್. ಲೂಯಿಸ್, ಮಕ್ಕಳ ಹೃದಯ ಶಾಸ್ತ್ರ ವಿಭಾಗದ ಡಾ.ಅಕ್ಕತಾಯ ಎಸ್. ತೇಲಿ ಹಾಗೂ ಡಿಎಂ ಮೋಹನ್ ಶೆಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News