ಸಿಎಎ ವಿರುದ್ಧ ರಾಜ್ಯಗಳಿಂದ ನಿರ್ಣಯ ಅಂಗೀಕಾರ ಕೇವಲ ರಾಜಕೀಯ ನಡೆಯಷ್ಟೇ: ಶಶಿತರೂರ್

Update: 2020-01-23 16:37 GMT
ಫೈಲ್ ಚಿತ್ರ 

ಹೊಸದಿಲ್ಲಿ,ಜ.23: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೆಲವು ರಾಜ್ಯಗಳು ಅಂಗೀಕರಿಸಿದ ನಿರ್ಣಯವು ರಾಜಕೀಯ ನಡೆಯಾಗಿದ್ದು, ಪೌರತ್ವವನ್ನು ನೀಡುವಲ್ಲಿ ಅವುಗಳಿಗೆ ಯಾವುದೇ ಅಧಿಕಾರವಿರುವುದಿಲ್ಲ ಎಂದು ಕಾಂಗ್ರೆಸ್ ನಾಯಕ ಶಶಿತರೂರ್ ಗುರುವಾರ ತಿಳಿಸಿದ್ದಾರೆ.

 ಕೋಲ್ಕತಾದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ರಾಷ್ಟ್ರೀಯ ಪೌರತ್ವ ನೋಂದಣಿ ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಪ್ರಕ್ರಿಯೆಯಲ್ಲಿ ರಾಜ್ಯ ಸರಕಾರಗಳ ಅಧಿಕಾರಿಗಳು ಪಾಲ್ಗೊಳ್ಳಬೇಕಿರುತ್ತದೆ. ಹೀಗಾಗಿ ಅವುಗಳ ಮೇಲೆ ರಾಜ್ಯ ಸರಕಾರಕ್ಕೆ ಅಧಿಕಾರವಿರುತ್ತದೆ ಎಂದರು.

 ಸಿಎಎಯನ್ನು ಹಿಂತೆಗೆದುಕೊಳ್ಳುವಂತೆ ಕೇಂದ್ರವನ್ನು ಆಗ್ರಹಿಸುವ ನಿರ್ಣಯವನ್ನು ಕೇರಳ ಹಾಗೂ ಪಂಜಾಬ್ ಸರಕಾರಗಳು ಇತ್ತೀಚೆಗೆ ವಿಧಾನಸಭೆಯಲ್ಲಿ ಅಂಗೀಕರಿಸಿದ್ದರೆ, ಪಶ್ಚಿಮಬಂಗಾಳ ಕೂಡಾ ಇಂತಹದೇ ನಿರ್ಣಯವನ್ನು ಮಂಡಿಸುವುದಾಗಿ ತಿಳಿಸಿತ್ತು.

 ಆದರೆ ತಾವು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲವೆಂದು ಹೇಳಲು ರಾಜ್ಯ ಸರಕಾರಗಳಿಗೆ ಅಧಿಕಾರವಿಲ್ಲ. ಆದರೆ ಎನ್‌ಪಿಆರ್ ಮತ್ತು ಎನ್‌ಸಿಆರ್‌ಯಲ್ಲಿ ತಮಗೂ ನಿರ್ಣಾಯಕ ಪಾತ್ರವಿರುವುದರಿಂದ ಅವನ್ನು ಜಾರಿಗೊಳಿಸಲಾರೆವೆಂದು ಅವು ಹೇಳಬಹುದಾಗಿದೆ ಎಂದು ತರೂರ್ ತಿಳಿಸಿದರು.

ಪೌರತ್ವಕ್ಕೆ ಸಂಬಂಧಿಸಿ ಧರ್ಮಗಳನ್ನು ಹೆಸರಿಸುವ ಮೂಲಕ ಸರಕಾರವು ಸಂವಿಧಾನದ ನಿಯಮವನ್ನು ಉಲ್ಲಂಘಿಸಿದೆಯೆಂದು ಅವರು ತಿಳಿಸಿದರು. ಆದರೆ ಸಿಎಎ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಯನ್ನು ಪಂಚಸದಸ್ಯ ವಿಸ್ತೃತ ನ್ಯಾಯಪೀಠಕ್ಕೆ ಒಪ್ಪಿಸುವ ಸುಪ್ರೀಂಕೋರ್ಟ್‌ನ ನಿರ್ಧಾರವನ್ನು ತರೂರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News