ಕೇಜ್ರಿವಾಲ್ ಚರ ಆಸ್ತಿ ಮೌಲ್ಯದಲ್ಲಿ ಏರಿಕೆ

Update: 2020-01-23 17:05 GMT

ಹೊಸದಿಲ್ಲಿ, ಜ. 23: ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಒಟ್ಟು ಚರ ಆಸ್ತಿ ಮೌಲ್ಯ 2015ರಿಂದ 8 ಲಕ್ಷ ರೂಪಾಯಿ ಏರಿಕೆ ಆಗಿದೆ. ಹೊಸದಿಲ್ಲಿ ವಿಧಾನ ಸಬಾ ಕ್ಷೇತ್ರದಿಂದ ನಿರಂತರ ಮೂರನೇ ಬಾರಿ ಸ್ಪರ್ಧಿಸುತ್ತಿರುವ ಕೇಜ್ರಿವಾಲ್ ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿದಾವಿತ್‌ನಲ್ಲಿ ತಾನು ಕಳೆದ ಐದು ವರ್ಷಗಳಿಂದ ಯಾವುದೇ ಹೊಸ ಸ್ಥಿರ ಆಸ್ತಿ ಖರೀದಿಸಿಲ್ಲ ಎಂದು ಘೋಷಿಸಿದ್ದಾರೆ. 7 ಮಾನನಷ್ಟ ಮೊಕದ್ದಮೆ ಸೇರಿದಂತೆ ಕೇಜ್ರಿವಾಲ್ ವಿರುದ್ಧ 13 ಕ್ರಿಮಿಲ್ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ ಎಂದು ಅಫಿದಾವಿತ್ ಹೇಳಿದೆ.

2015ಕ್ಕೆ ಹೋಲಿಸಿದರೆ 2020ರಲ್ಲಿ ಅವರು ಚಾಂದಿನಿ ಚೌಕ್ ವಿಧಾನ ಸಭಾ ಕ್ಷೇತ್ರದಲ್ಲಿ ಹೆಸರು ನೋಂದಾಯಿಸಿಕೊಂಡಿರುವುದರಿಂದ ಹೊಸದಿಲ್ಲಿ ವಿಧಾನಸಭಾ ಕ್ಷೇತ್ರದಲ್ಲಿ ಅವರು ಮತದಾರರಾಗಿ ಉಳಿದುಕೊಂಡಿಲ್ಲ ಎಂದು ಅಫಿದಾವಿತ್ ತಿಳಿಸಿದೆ. ಕೇಜ್ರಿವಾಲ್ ಅವರ ಚರ ಆಸ್ತಿ ಮೌಲ್ಯ ಏರಿಕೆಯಾದರೆ, ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಚರ ಆಸ್ತಿಗಳ ಮೌಲ್ಯ 2013-14ರಲ್ಲಿ ರೂ. 4,92,624 ಇದ್ದುದು 2018-19ರಲ್ಲಿ ರೂ. 4,74,888ಕ್ಕೆ ಇಳಿಕೆಯಾಗಿದೆ. ಅರವಿಂದ್ ಕೇಜ್ರಿವಾಲ್ ಚರ ಆಸ್ತಿ ಮೌಲ್ಯ 2015ರಲ್ಲಿ ರೂ. 2,26,005 ಇದ್ದುದು 2020ರಲ್ಲಿ ರೂ. 9,95,741ಕ್ಕೆ ಏರಿಕೆಯಾಗಿದೆ. ಅಂದರೆ ಅವರ ಚರ ಆಸ್ತಿ ಮೌಲ್ಯ ರೂ. 7.69,736 ಏರಿಕೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News