ಜೈಲಿನಿಂದ ಬಿಡುಗಡೆಯಾದ ಹಾರ್ದಿಕ್ ಪಟೇಲ್ ಮತ್ತೆ ಬಂಧನ

Update: 2020-01-23 17:08 GMT

ಅಹ್ಮದಾಬಾದ್, ನ. 23: ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆದ ಒಂದು ದಿನದ ಬಳಿಕ ಗುರುವಾರ ಇಲ್ಲಿನ ಸಾಬರ್ಮತಿ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾದ ಕಾಂಗ್ರೆಸ್ ನಾಯಕ ಹಾರ್ದಿಕ್ ಪಟೇಲ್ ಅವರನ್ನು ಪೊಲೀಸ್ ಅನುಮತಿ ಇಲ್ಲದೆ ರ್ಯಾಲಿಯಲ್ಲಿ ಮಾತನಾಡಿದ 2017ರ ಪ್ರಕರಣವೊಂದಕ್ಕೆ ಸಂಬಂಧಿಸಿ ಗಾಂಧಿ ನಗರ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. 2015ರ ದೇಶದ್ರೋಹ ಪ್ರಕರಣದ ವಿಚಾರಣೆಗ ವಿಚಾರಣಾ ನ್ಯಾಯಾಲಯದ ಮುಂದೆ ಹಾಜರಾಗದ ಹಿನ್ನೆಲೆಯಲ್ಲಿ ಬಂಧಿತರಾಗಿದ್ದ ಹಾರ್ದಿಕ್ ಪಟೇಲ್‌ಗೆ ನಾಲ್ಕು ದಿನಗಳ ಬಳಿಕ ಬುಧವಾರ ಅಹ್ಮದಾಬಾದ್‌ನ ಸ್ಥಳೀಯ ನ್ಯಾಯಾಲಯ ಜಾಮೀನು ನೀಡಿತ್ತು. ಜಾಮೀನು ಪಡೆದು ಗುರುವಾರ ಅಪರಾಹ್ನ ಕಾರಾಗೃಹದಿಂದ ಹೊರ ಬರುತ್ತಿರುವಂತೆ ಅವರನ್ನು ಪೊಲೀಸ್ ಆದೇಶ ಉಲ್ಲಂಘಿಸಿದ 2017ರ ಪ್ರಕರಣದ ಹಿನ್ನೆಲೆಯಲ್ಲಿ ದಾಖಲಾಗಿದ್ದ ಎಫ್‌ಐಆರ್‌ಗೆ ಸಂಬಂಧಿಸಿ ಗಾಂಧಿ ನಗರದ ಮಾನ್ಸಾ ತೆಹ್ಸಿಲ್ ಪೊಲೀಸರು ಬಂಧಿಸಿದರು.

‘‘ಇಂದು ಜೈಲಿನಿಂದ ಬಿಡುಗಡೆಗೊಂಡು ಹೊರಗೆ ಬರುತ್ತಿರುವಂತೆ ನಾವು ಹಾರ್ದಿಕ್ ಪಟೇಲ್ ಅವರನ್ನು ಬಂಧಿಸಿದೆವು. ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ 2017 ಡಿಸೆಂಬರ್‌ನಲ್ಲಿ ಅವರು ಪೊಲೀಸ್ ಅನುಮತಿ ಇಲ್ಲದೆ ಮಾನ್ಸಾ ಪಟ್ಟಣದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ್ದರು. ಆಗ ಎಫ್‌ಐಆರ್ ದಾಖಲಿಸಲಾಗಿತ್ತು. ಇಂದು ಅವರನ್ನು ಬಂಧಿಸಲಾಗಿದೆ’’ ಎಂದು ಮಾನ್ಸಾದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಎಸ್.ಎಸ್. ಪವಾರ್ ಹೇಳಿದ್ದಾರೆ. 2015ರ ದೇಶದ್ರೋಹದ ಪ್ರಕರಣದ ವಿಚಾರಣೆಗೆ ಇಲ್ಲಿನ ನ್ಯಾಯಾಲಯದ ಮುಂದೆ ಹಾಜರಾಗಲು ವಿಫಲವಾದ ಹಿನ್ನೆಲೆಯಲ್ಲಿ ಅಹ್ಮದಾಬಾದ್ ಜಿಲ್ಲೆಯ ವಿರಾಂಗಂ ತೆಹ್ಸಿಲ್‌ನ ಕ್ರೈಮ್ ಬ್ರಾಂಚ್ ಹಾರ್ದಿಕ್ ಪಟೇಲ್ ಅವರನ್ನು ಜನವರಿ 18ರಂದು ಬಂಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News