ಮಾಧ್ಯಮಗಳ ಬೇಜವಾಬ್ದಾರಿಯಿಂದ ಸಮಾಜದಲ್ಲಿ ಅಶಾಂತಿ ಸೃಷ್ಟಿ : ಇಕ್ಬಾಲ್ ಬೆಳ್ಳಾರೆ

Update: 2020-01-23 17:31 GMT

ಪುತ್ತೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಆರೋಪಿ ಆದಿತ್ಯ ರಾವ್ ಬಗ್ಗೆ ರಾಜ್ಯದ ಮಾಧ್ಯಮಗಳು ತಮ್ಮ ಜವಾಬ್ದಾರಿ ಮತ್ತು ಕರ್ತವ್ಯಗಳನ್ನು ಮರೆತು ಒಂದು ಸಮುದಾಯದ ಬಗ್ಗೆ ಆರೋಪ ಬರುವಂತೆ ವರದಿ ಮಾಡಿರುವುದ ರಿಂದ ಸಮಾಜದಲ್ಲಿ ಆಶಾಂತಿ ಸೃಷ್ಠಿಯಾಗಲು ಕಾರಣವಾಗಿದೆ ಎಂದು ಎಸ್‍ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಆರೋಪಿಸಿದರು.

ಅವರು ಗುರುವಾರ ಸಂಜೆ ಮಂಗಳೂರು ಬಾಂಬ್ ಷಡ್ಯಂತ್ರವನ್ನು ಬಯಲಿಗೆಳೆಯುವಂತೆ ಆಗ್ರಹಿಸಿ ಎಸ್‍ಡಿಪಿಐ ವತಿಯಿಂದ ಪುತ್ತೂರು ಬಸ್ಸು ನಿಲ್ದಾಣದ ಬಳಿಯಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಬೇಕಾಗಿರುವ ಮಾಧ್ಯಮಗಳು ಇಂತಹ ಕೀಳು ಮಟ್ಟಕ್ಕೆ ತಲುಪಿರುವುದು ದುರಂತ ಎಂದ ಅವರು ಮಾಧ್ಯಮಗಳ ಮೂಲಕ ಮಂಗಳೂರು ಬಾಂಬ್ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ ಎಂದರು. 

ಪಿಎಫ್‍ಐ ಪುತ್ತೂರು ಜಿಲ್ಲಾಧ್ಯಕ್ಷ ಜಾಬಿರ್ ಅರಿಯಡ್ಕ ಮಾತನಾಡಿ ಪುತ್ತೂರು ಆರ್‍ಎಸ್‍ಎಸ್ ಮತ್ತು ಬಿಜೆಪಿಯ ಭಯೋತ್ಪಾಧನಾ ಕೇಂದ್ರವಾಗುತ್ತಿದೆ. ಈಶ್ವರಮಂಗಲದಲ್ಲಿ ಪತ್ತೆಯಾದ ಸ್ಪೋಟಕ ಸಾಮಗ್ರಿ ತಯಾರಿಕೆ ಸೇರಿದಂತೆ ಮಂಗಳೂರಿನಲ್ಲಿ ನಡೆದ ಬಾಂಬ್ ಸ್ಪೋಟ ಯತ್ನ ಎಲ್ಲದರ ಬಗ್ಗೆಯೂ ಸಮಗ್ರ ತನಿಖೆಯಾಗಬೇಕಾಗಿದೆ. ಇದರ ಹಿಂದಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಸೂಕ್ತ ಕಾನೂನು ಶಿಕ್ಷೆ ನೀಡಬೇಕು. ಹೀಗೇ ಮುಂದುವರಿದಲ್ಲಿ ಪುತ್ತೂರಿಗೆ ಬಹುದೊಡ್ಡ ಅಪಾಯವಾಗುವ ಸಂಭವವಿದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಎಸ್‍ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಕೆ.ಎ. ಸಿದ್ದೀಕ್, ಉಪಾಧ್ಯಕ್ಷ ಇಬ್ರಾಹಿಂ ಸಾಗರ್, ಕಾರ್ಯದರ್ಶಿ ಅಶ್ರಫ್ ಬಾವು, ಜೊತೆ ಕಾರ್ಯದರ್ಶಿ ಯಹ್ಯಾ ಕೂರ್ನಡ್ಕ, ಪಿಎಫ್‍ಐ ಉಪ್ಪಿನಂಗಡಿ ವಲಯ ಅಧ್ಯಕ್ಷ ಹಮೀದ್ ಮೆಜೆಸ್ಟಿಕ್, ಮುಖಂಡರಾದ ಶಾಕಿರ್ ಅಳಕೆಮಜಲು, ಹಮೀದ್ ಸಾಲ್ಮರ, ಅದ್ದು ಕೊಡಿಪ್ಪಾಡಿ. ಇರ್ಶಾದ್ ಕಾವು ಮತ್ತಿತರರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News