ಆರ್ಥಿಕ ಗಣತಿ ಬಗ್ಗೆ ಜನರಿಗೆ ಮಾಹಿತಿ ನೀಡಿ: ಜಿಲ್ಲಾಧಿಕಾರಿ ಸಿಂಧೂ

Update: 2020-01-23 17:49 GMT

ಮಂಗಳೂರು, ಜ.23: ಆರ್ಥಿಕ ಗಣತಿಯ ಕುರಿತು ಜನರಿಗೆ ಸಂಕ್ಷಿಪ್ತ ಮಾಹಿತಿ ನೀಡಬೇಕು. ಮೊಬೈಲ್ ಆ್ಯಪ್ ಮೂಲಕ ಕ್ಷೇತ್ರ ಕಾರ್ಯ ನಡೆಸಲಾಗುವುತ್ತಿರುವುದರಿಂದ ಸವಿವರವಾದ ಮಾಹಿತಿಯನ್ನು ಜನರಿಗೆ ಜಾಗೃತಿ ಕಾರ್ಯಕ್ರಮಗಳ ಮೂಲಕ ತಲುಪಿಸ ಬೇಕು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.

ನಗರದ ಜಿಲ್ಲಾಧಿಕಾರಿ ಕಚೇರಿಯ ಕೋರ್ಟ್ ಹಾಲ್‌ನಲ್ಲಿ ಗುರುವಾರ ನಡೆದ 7ನೇ ಆರ್ಥಿಕ ಗಣತಿ 2019ರ ಕಾರ್ಯಾಚರಣೆಯ ಸಂಯೋಜನೆಗೆ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆರ್ಥಿಕ ಗಣತಿಯ ಕುರಿತು ತಾಲೂಕು ಮಟ್ಟದಲ್ಲಿ ಸಭೆ ಕರೆದು ಪ್ರತೀ ತಾಲೂಕು ತಹಶೀಲ್ದಾರರು, ತಾಪಂ ಅಧಿಕಾರಿಗಳು, ತಾಲೂಕು ಮಟ್ಟದ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡು ಚರ್ಚಿಸಬೇಕು. ಆರ್ಥಿಕ ಗಣತಿಯ ಮುಖ್ಯ ಉದ್ದೇಶ ಏನು, ಯಾವ ಕಾರಣಕ್ಕಾಗಿ ಈ ಗಣತಿ ಮಾಡಲಾಗುತ್ತದೆ, ಯಾವ ಪ್ರಶ್ನೆಗಳನ್ನು ಯಾಕೆ ಕೇಳಲಾಗುತ್ತದೆ ಎಂಬುದನ್ನು ಮೊದಲು ಜನರಿಗೆ ಮನವರಿಕೆ ಮಾಡಬೇಕು ಎಂದರು.

ಇದೇ ಮೊದಲ ಬಾರಿಗೆ ಗಣತಿ ಕಾರ್ಯವನ್ನು ಮೊಬೈಲ್ ಆ್ಯಪ್ ಮೂಲಕ ಕೈಗೊಳ್ಳಲಾಗಿರುತ್ತದೆ. ಆ್ಯಪ್‌ನ ವೈಶಿಷ್ಟಗಳು, ಅದನ್ನು ಉಪಯೋಗಿಸುವ ಕ್ರಮಗಳ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿ ನೀಡಬೇಕು ಎಂದರು.

7ನೇ ಆರ್ಥಿಕ ಗಣತಿಯಲ್ಲಿ ಕಟ್ಟಡದ ವಿಧ, ಕುಟುಂಬ ವಿವರ, ಸಾಮಾಜಿಕ ಗುಂಪು ಮತ್ತು ಧರ್ಮ, ಆರ್ಥಿಕ ಚಟುವಟಿಕೆಯ ವಿಧ, ಕಾರ್ಯವಿಧಾನ ಸ್ವರೂಪ, ಮನೆಯಲ್ಲಿ ಆರ್ಥಿಕ ಚಟುವಟಿಕೆ ನಡೆಸುವ ಸದಸ್ಯರ ವಿವರ, ಹಣಕಾಸಿನ ಮೂಲ, ಹೂಡಿಕೆ, ವಾರ್ಷಿಕ ವ್ಯವಹಾರ, ಕೆಲಸಗಾರರ ಸಂಖ್ಯೆ, ಘಟಕದ ನೋಂದಣಿಯ ವಿವರ, ಉದ್ಯಮ ಮಾಲಕರ ಲಿಂಗವಾರು ಸಾಮಾಜಿಕ ಗುಂಪುವಾರು ಮಾಹಿತಿಗಳು, ಗಂಡು ಹೆಣ್ಣು ಕೆಲಸಗಾರರು, ಮಜೂರಿದಾರ ಕೆಲಸಗಾರರು, ಮಜೂರಿದಾರರಲ್ಲದ ಕೆಲಸಗಾರರು, ಇವರ ಉದ್ದಿಮೆಗಾಗಿ ಹಣಕಾಸಿನ ಮೂಲ ಇತ್ಯಾದಿ ಮಾಹಿತಿಗಳು ಈ ಗಣತಿಯಲ್ಲಿ ಸಂಗ್ರಹವಾಗುತ್ತದೆ. ಗಣತಿ ಸಂದರ್ಭ ಉತ್ತಮ ಸಹಕಾರ ನೀಡುವಂತೆ ಮಾಹಿತಿ ಪಡೆಯಬೇಕು ಎಂದರು.

ಜನರು ಮಾಹಿತಿ ನೀಡಲು ಹಿಂಜರಿದರೆ ವಿಶೇಷವಾಗಿ ಆರ್ಥಿಕ ಗಣತಿಯ ಕುರಿತು ಜಾಗೃತಿ ಕಾರ್ಯಕ್ರಮಗಳನ್ನು ನೀಡಿ ಗಣತಿಗೆ ಸ್ಪಂದನೆ ನೀಡುವಂತೆ ಕಾರ್ಯ ನಿರ್ವಹಿಸಬೇಕು. ಗಣತಿಗೆ ಸಂಬಂಧಪಟ್ಟ ಎಲ್ಲ ಅಧಿಕಾರಿಗಳು ಚುರುಕಾಗಿ ಆಸಕ್ತಿಯಿಂದ ಈ ಗಣತಿಯನ್ನು ಯಶಸ್ವಿಯಾಗಿಸಬೇಕು ಎಂದು ಹೇಳಿದರು.

ಸಭೆಯಲ್ಲಿ ಪುತ್ತೂರು ತಹಶೀಲ್ದಾರ್ ರಾಹುಲ್ ಶಿಂಧೆ, ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಡಾ.ಉದಯ ಶೆಟ್ಟಿ, ಸಹಾಯಕ ಸಾಂಖಿಕ ಅಧಿಕಾರಿ ಎ.ಡಿ. ಬೋಪಯ್ಯ ಮತ್ತು ವಿವಿಧ ತಾಲೂಕು ಅಧಿಕಾರಿಗಳು, ತಹಶೀಲ್ದಾರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News