ಪೆರಿಯಾರ್ ವಿವಾದ: ರಜನಿಕಾಂತ್ ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

Update: 2020-01-24 17:15 GMT

ಚೆನ್ನೈ, ಜ.24: ಸಮಾಜ ಸುಧಾರಕ ಪೆರಿಯಾರ್ ಇವಿ ರಾಮಸ್ವಾಮಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ತಮಿಳು ನಟ ರಜನೀಕಾಂತ್ ವಿರುದ್ಧ ಕ್ರಮ ಜರಗಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ದ್ರಾವಿಡರ್ ವಿಡುದಲೈ ಕಳಗಂ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಪ್ರತಿಕ್ರಿಯಿಸಿದ ಮದ್ರಾಸ್ ಹೈಕೋರ್ಟ್‌ನ ನ್ಯಾಯಾಧೀಶ ಪಿ ರಾಜಾಮಾಣಿಕಂ, ಅರ್ಜಿದಾರರು ಕೆಳ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಿತ್ತು ಎಂದು ಹೇಳಿದರು. ಪರ್ಯಾಯ ಪರಿಹಾರ ಕ್ರಮದ ಬಗ್ಗೆ ಯೋಚಿಸದೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ರಾಜ್ಯದ ಪಬ್ಲಿಕ್ ಪ್ರಾಸಿಕ್ಯೂಟರ್ ಎ ನಟರಾಜನ್ ಹೇಳಿದಾಗ, ಅರ್ಜಿಯನ್ನು ಹಿಂಪಡೆಯುವಿರಾ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. ಇದಕ್ಕೆ ಅರ್ಜಿದಾರರು ಒಪ್ಪಿದಾಗ ಪ್ರಕರಣವನ್ನು ವಜಾ ಮಾಡಲಾಯಿತು. ಜನವರಿ 14ರಂದು ನಡೆದ ತಮಿಳು ಸಾಪ್ತಾಹಿಕ ಮ್ಯಾಗಝಿನ್ ‘ತುಘಲಕ್’ನ 50ನೇ ವಾರ್ಷಿಕೋತ್ಸವ ಸಂದರ್ಭ ಮಾತನಾಡಿದ್ದ ರಜನೀಕಾಂತ್, 1971ರಲ್ಲಿ ಪೆರಿಯಾರ್ ಉಪಸ್ಥಿತಿಯಲ್ಲಿ ಸೇಲಂನಲ್ಲಿ ನಡೆದಿದ್ದ ಮೂಢನಂಬಿಕೆ ವಿರೋಧಿ ರ್ಯಾಲಿಯಲ್ಲಿ ರಾಮ ಮತ್ತು ಸೀತೆಯರ ಬೆತ್ತಲೆ ಪ್ರತಿಕ್ರಿತಿಗಳಿಗೆ ಪಾದರಕ್ಷೆಯ ಹಾರ ಹಾಕಿ ಮೆರವಣಿಗೆ ಮಾಡಲಾಗಿತ್ತು ಎಂದು ಹೇಳಿದ್ದರು. ರಜನೀಕಾಂತ್ ಪೆರಿಯಾರ್ ಅವರ ಘನತೆಗೆ ಕುಂದುಂಟು ಮಾಡುವ ಉದ್ದೇಶದಿಂದ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ದ್ರಾವಿಡ ವಿಡುದಲೈ ಕಳಗಂ ಜನವರಿ 17ರಂದು ಪೊಲೀಸರಲ್ಲಿ ದೂರು ದಾಖಲಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News