ನಿರ್ದಿಷ್ಟ ಸಮುದಾಯವನ್ನು ನಿಂದಿಸುವ ಚಾಳಿ ಮುಂದುವರಿಸಿದರೆ ಕಪ್ಪುಬಾವುಟ ಪ್ರದರ್ಶನ: ಮಿಥುನ್ ರೈ ಎಚ್ಚರಿಕೆ

Update: 2020-01-25 10:44 GMT

 ಮಂಗಳೂರು, ಜ.25: ಮಂಗಳೂರು ವಿಮಾನ ನಿಲ್ದಾಣದಲ್ಲಿ ಕಳೆದ ಸೋಮವಾರ ಸ್ಫೋಟಕ ಪತ್ತೆಯಾದೊಡನೆ ರಾಜ್ಯದ ಕೆಲವು ಸಚಿವರು ಮತ್ತು ಬಿಜೆಪಿ ಮುಖಂಡರು ನಿರ್ದೀಷ್ಟ ಸಮುದಾಯವನ್ನು ನಿಂದಿಸಿದ್ದಾರೆ. ಆರೋಪಿಯ ಪತ್ತೆಯಾದೊಡನೆ ಈ ನಾಯಕರು ತದ್ವಿರುದ್ಧ ಹೇಳಿಕೆ ನೀಡತೊಡಗಿದ್ದಾರೆ. ಮುಂದಿನ ದಿನಗಳಲ್ಲಿ ಯಾವುದೇ ಪ್ರಕರಣಕ್ಕೆ ಸಂಬಂಧಿಸಿ ನಿರ್ದಿಷ್ಟ ಸಮುದಾಯವನ್ನು ವಿನಾ ಕಾರಣ ಗುರಿ ಮಾಡುವುದನ್ನು ಮುಂದುವರಿಸಿದರೆ ಅಂತಹ ಸಚಿವರು, ಬಿಜೆಪಿ ಮುಖಂಡರ ವಿರುದ್ಧ ದ.ಕ. ಜಿಲ್ಲಾ ಭೇಟಿಯ ಸಂದರ್ಭ ಕಪ್ಪುಬಾವುಟ ಪ್ರದರ್ಶಿಸಲಾಗುವುದು ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಎಚ್ಚರಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿದ ಅವರು, ಮಂಗಳೂರು ವಿಮಾನ ನಿಲ್ದಾಣದೊಳಗೆ 10 ಕೆ.ಜಿ. ಆರ್ ಡಿಎಕ್ಸ್ ಸಾಗಿಸಲಾಗಿದೆ ಎಂದ ಸರಕಾರ, ಪೊಲೀಸ್ ಇಲಾಖೆ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಮತ್ತು ಆಧಾರರಹಿತ ಹೇಳಿಕೆ ನೀಡಿದ್ದಕ್ಕಾಗಿ ಸರಕಾರ ಕ್ಷಮೆ ಯಾಚಿಸಬೇಕು ಎಂದು ಒತ್ತಾಯಿಸಿದರು.

ಈ ಸ್ಫೋಟಕ ಪ್ರಕರಣಕ್ಕೆ ಸಂಬಂಧಿಸಿ ಬೇಜವಬ್ದಾರಿ ಹೇಳಿಕೆ‌ ನೀಡುತ್ತಿರುವ ಬಿಜೆಪಿಗರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರು ಸೂಕ್ತ ಕ್ರಮ ಜರುಗಿಸಬೇಕು ಎಂದ ಮಿಥುನ್ ರೈ, ದ.ಕ. ಜಿಲ್ಲೆಯನ್ನು ಕೋಮುಗಲಭೆ ಪೀಡಿತ ಪ್ರದೇಶವನ್ನಾಗಿಸಲು ಬಿಡುವುದಿಲ್ಲ. ಬಿಜೆಪಿಗರ ಈ ಷಡ್ಯಂತ್ರದ  ವಿರುದ್ಧ ಯುವ ಕಾಂಗ್ರೆಸ್ ಹೋರಾಟ ಮಾಡಲಿದೆ ಎಂದರು.

ಕಾರ್ಪೊರೇಟರ್ ಎಸಿ ವಿನಯರಾಜ್ ಮಾತನಾಡಿ, ಮಂಗಳೂರು ಗಲಭೆಗೆ ಸಂಬಂಧಿಸಿ ಡಿ.19ರಂದು ಮಂಗಳೂರಿಗೆ ಆಗಮಿಸಿದ ಕೇರಳಿಗರಿಗೆ ನೋಟಿಸ್ ಜಾರಿಗೊಳಿಸಿದ ಮಂಗಳೂರು ಪೊಲೀಸ್ ಆಯುಕ್ತರ ಕ್ರಮ ಖಂಡನೀಯ. ಮಸೀದಿಗಳಲ್ಲಿ ಶಸ್ತ್ರಾಸ್ತ್ರಗಳನ್ನು ಶೇಖರಿಸಿಡಲಾಗುತ್ತದೆ ಎಂಬ ರೇಣುಕಾಚಾರ್ಯರ ಹೇಳಿಕೆಯು ಬಾಲಿಶತನದಿಂದ ಕೂಡಿದೆ. ಅವರ ವಿರುದ್ಧವೂ ಮುಖ್ಯಮಂತ್ರಿಯು ತಕ್ಷಣ ಕ್ರಮ ಜರಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರವೀಣ್ ಆಳ್ವ, ಕೆ.ಮುಹಮ್ಮದ್, ಅನಿಲ್ ಕುಮಾರ್, ಗಿರೀಶ್ ಆಳ್ವ, ಅನ್ಸಾರ್ ಸಾಲ್ಮರ್, ಎಸ್.ಕೆ.ಸೌಹಾನ್ ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News