ಬಂಟ್ವಾಳ: ಭೂ ಬ್ಯಾಂಕ್ ಚುನಾವಣೆ ವೇಳೆ ಕಾಂಗ್ರೆಸ್, ಸಹಕಾರ ಭಾರತಿ ಬೆಂಬಲಿಗರ ನಡುವೆ ವಾಕ್ಸಮರ

Update: 2020-01-25 08:55 GMT

ಬಂಟ್ವಾಳ, ಜ.25: ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್(ಭೂ ಅಭಿವೃದ್ಧಿ ಬ್ಯಾಂಕ್) ಚುನಾವಣೆಯ ವೇಳೆ ಮತದಾರರ ಪಟ್ಟಿಯ ವಿಚಾರವಾಗಿ ಉಂಟಾದ ಗೊಂದಲ ಕಾಂಗ್ರೆಸ್ ಮತ್ತು ಸಹಕಾರ ಭಾರತಿ ಬೆಂಬಲಿಗರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾದ ಘಟನೆ ಶನಿವಾರ ನಡೆದಿದೆ.

ಭೂ ಅಭಿವೃದ್ಧಿ ಬ್ಯಾಂಕ್ ಚುನಾವಣೆ ಇಂದು ಬಂಟ್ವಾಳ ಮಿನಿ ವಿಧಾನಸೌಧದಲ್ಲಿ ನಡೆಯುತ್ತಿದೆ. 12 ಸ್ಥಾನಗಳಿಗೆ ಕಾಂಗ್ರೆಸ್ ಮತ್ತು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಯ ವೇಳೆ ಮತದಾರರ ಪಟ್ಟಿಯಲ್ಲಿ ದೋಷವಿದೆ ಎಂದು ಶಾಸಕ ರಾಜೇಶ್ ನಾಯ್ಕ್ ನೇತೃತ್ವದಲ್ಲಿ ಸಹಕಾರ ಭಾರತಿ ಬೆಂಬಲಿಗರು ಆಕ್ಷೇಪ ವ್ಯಕ್ತಪಡಿಸಿದರು. ಇದು ಗೊಂದಲಕ್ಕೆ ಕಾರಣವಾಯಿತು.

ಇದೇವೇಳೆ ಮಾಜಿ ಸಚಿವ ಬಿ.ರಮಾನಾಥ ರೈ ಮತದಾನ ಮಾಡಿ ವಾಪಸ್ ಆಗುತ್ತಿದ್ದಾಗ ಸಹಕಾರ ಭಾರತಿ ಬೆಂಬಲಿಗರು ಆಕ್ಷೇಪಿಸಿದರೆನ್ನಲಾಗಿದೆ. ಇದು ಕಾಂಗ್ರೆಸ್ ಮತ್ತು ಸಹಕಾರ ಭಾರತಿ ಬೆಂಬಲಿಗರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಯಿತು. ಇದರಿಂದ ಸುಮಾರು ಒಂದು ಗಂಟೆ ಕಾಲ ಮತದಾನ ಸ್ಥಗಿತಗೊಂಡಿತು.

ಗೊಂದಲದ ಕಾರಣದಿಂದ ಎರಡೂ ಬಣಗಳ ನೂರಾರು ಕಾರ್ಯಕರ್ತರು ಸ್ಥಳದಲ್ಲಿ ಜಮಾಯಿಸಿದ್ದರು. ಇದರಿಂದ ಕೆಲ ಹೊತ್ತು ಸ್ಥಳದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಬಳಿಕ ತಹಶೀಲ್ದಾರ್ ಮತ್ತು ಪೊಲೀಸರ ಮಧ್ಯಸ್ಥಿಕೆ ವಹಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಬಳಿಕ ಮತದಾನ ಶಾಂತಿಯುತವಾಗಿ ಮುಂದುವರಿಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News