ಬೆವರಿನಿಂದ ಮಸಾಜ್ ಮಾಡುವುದರಿಂದ ನನ್ನ ಮುಖ ಹೊಳೆಯುತ್ತದೆ: ಮಕ್ಕಳ ಜೊತೆಗಿನ ಸಂವಾದದಲ್ಲಿ ಮೋದಿ

Update: 2020-01-25 09:35 GMT

ಹೊಸದಿಲ್ಲಿ: ತಮ್ಮ ಮುಖವೇಕೆ ಸದಾ 'ಹೊಳಪಿನಿಂದ' ಕೂಡಿದೆ ಎಂಬುದರ ರಹಸ್ಯವನ್ನು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಮುಂದೆ ಬಿಚ್ಚಿಟ್ಟಿದ್ದಾರೆ.

ರಾಷ್ಟ್ರೀಯ ಶೌರ್ಯ ಪ್ರಶಸ್ತಿ ಪಡೆದಿರುವ 49 ಮಕ್ಕಳ ಜತೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ,  "ನಿಮ್ಮ ಮುಖ ಇಷ್ಟೊಂದು ಹೊಳಪಿನಿಂದ ಹೇಗೆ ಕೂಡಿದೆ ಎಂದು ಯಾರೋ ಹಲವು ವರ್ಷಗಳ ಹಿಂದೆ ನನ್ನನ್ನು ಕೇಳಿದ್ದರು. ಅದಕ್ಕೊಂದು ಸರಳ ಉತ್ತರ ನನ್ನಲ್ಲಿತ್ತು. ನಾನು ಶ್ರಮ ಪಟ್ಟು ದುಡಿಯುತ್ತೇನೆ ಹಾಗು ನಾನು ಅದೆಷ್ಟು ಬೆವರುತ್ತೇನೆಂದರೆ ನನ್ನ ಮುಖವನ್ನು ಅದರಿಂದ ಮಸಾಜ್ ಮಾಡುತ್ತೇನೆ. ಇದು ನನ್ನ ಮುಖಕ್ಕೆ ಹೊಳಪು ನೀಡುತ್ತದೆ'' ಎಂದು ಪ್ರಧಾನಿ ಹೇಳಿದರು.

ಎಲ್ಲಾ ಮಕ್ಕಳೂ ದಿನಕ್ಕೆ ಕನಿಷ್ಠ ನಾಲ್ಕು ಬಾರಿ ಬಹಳಷ್ಟು ಕಷ್ಟಪಟ್ಟು ಬೆವರಲು ಕಲಿಯಬೇಕು ಎಂದೂ ಪ್ರಧಾನಿ ಸಲಹೆ ನೀಡಿದರು. ಪ್ರಶಸ್ತಿ ಬಂತೆಂದರೆ ಎಲ್ಲವೂ ಮುಗಿಯಿತೆಂದಲ್ಲ. ಅದರಿಂದ ಹೊಸ ಆರಂಭವಾಗಬೇಕು ಎಂದು ಪ್ರಧಾನಿ ಹೇಳಿದರು.

"ಯಾವುದು ಮುಖ್ಯ, ಹಕ್ಕುಗಳೋ, ಕರ್ತವ್ಯಗಳೋ" ಎಂದು ಪ್ರಧಾನಿ ಕೇಳಿದಾಗ ಮಕ್ಕಳೆಲ್ಲಾ `ಹಕ್ಕುಗಳು' ಎಂದು ಜೋರಾಗಿ ಹೇಳಿದಾಗ "ಹಾಗಾದರೆ ಇಂದು ನಾನು ಇಲ್ಲಿ ಹೊಸ ಕಾನೂನು ಅನುಮೋದಿಸಿದೆ'' ಎಂದು ಪ್ರಧಾನಿ ಹಾಸ್ಯ ಚಟಾಕಿ ಹಾರಿಸಿದರು.

ಮಕ್ಕಳ ಶೌರ್ಯದ ಕಥೆ ಕೇಳಿದಾಗ ನನಗೂ ಸ್ಫೂರ್ತಿಯುಂಟಾಗುತ್ತದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News