ಇಂಡಿಗೋ ವಿಮಾನಕ್ಕೆ ಬಾಂಬ್ ಇಟ್ಟಿದ್ದಾಗಿ ಮಲ್ಪೆಯಿಂದ ಕರೆ ಮಾಡಿದ್ದ ಆದಿತ್ಯ ರಾವ್

Update: 2020-01-25 10:02 GMT

ಮಲ್ಪೆ, ಜ.25: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಆದಿತ್ಯ ರಾವ್ ಅದೇ ದಿನ ಮಲ್ಪೆಗೆ ಆಗಮಿಸಿ ಗೂಡಂಗಡಿಯಲ್ಲಿ ಕುಳಿತು ಇಂಡಿಗೋ ವಿಮಾನದಲ್ಲಿ ಬಾಂಬ್ ಇಟ್ಟಿರುವುದಾಗಿ ಬೆದರಿಕೆ ಕರೆ ಮಾಡಿರುವ ಅಂಶ ಇದೀಗ ಬೆಳಕಿಗೆ ಬಂದಿದೆ.

ಜ.25ರಂದು ಮಧ್ಯಾಹ್ನ ವೇಳೆ ಆದಿತ್ಯ ರಾವ್‌ ನನ್ನು ಮಂಗಳೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಬಿಗಿ ಪೊಲೀಸ್ ಬಂದೋಬಸ್ತ್‌ ನಲ್ಲಿ ಮಲ್ಪೆಗೆ ಕರೆ ತಂದು ಈ ಕುರಿತು ಮಹಜರು ಪ್ರಕ್ರಿಯೆ ನಡೆಸಿದರು. ಜ.20ರಂದು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿ ಅಲ್ಲಿಂದ ಮಲ್ಪೆಗೆ ಆಗಮಿಸಿದ್ದ ಈತ, ಮಲ್ಪೆ ಪೊಲೀಸ್ ಠಾಣೆಯಿಂದ ಕೆಲವೇ ಮೀಟರ್ ದೂರದಲ್ಲಿರುವ ಗೂಡಂಗಡಿಯಲ್ಲಿ ಕುಳಿತು ತನ್ನ ಮೊಬೈಲ್‌ ನಿಂದ ಬೆದರಿಕೆ ಕರೆ ಮಾಡಿದ್ದ ಎನ್ನಲಾಗಿದೆ.

ನಂತರ ಆ ಸಿಮ್‌ ಅನ್ನು ಅಲ್ಲೇ ಎಸೆದು ಬೆಂಗಳೂರಿಗೆ ಹೊರಟಿದ್ದ. ಇಂದು ಆದಿತ್ಯ ರಾವ್ ಸ್ಥಳದಲ್ಲಿ ತಿಳಿಸಿದ ಮಾಹಿತಿಯಂತೆ ಗೂಡಂಗಡಿ ಸುತ್ತಮುತ್ತ ಪೊಲೀಸರು ಸಿಮ್‌ ಗಾಗಿ ಹುಡುಕಾಟ ನಡೆಸಿದರು. ಆದರೆ ಈ ಬಗ್ಗೆ ಯಾವುದೇ ಸುಳಿವು ಲಭ್ಯವಾಗಿಲ್ಲ.

ಮೊಟ್ಟೆ ಮಾರಾಟದ ಈ ಗೂಡಂಗಡಿ ಸ್ಥಳೀಯರದ್ದಾಗಿದ್ದು, ಇವರು ಸಂಜೆ ಆರು ಗಂಟೆಯ ನಂತರ ಅಂಗಡಿ ತೆರೆಯುತ್ತಿದ್ದು, ಈತ ಅಂಗಡಿ ಬಂದ್ ಇದ್ದ ಮಧ್ಯಾಹ್ನ ವೇಳೆ ಆಗಮಿಸಿದ್ದ ಎನ್ನಲಾಗಿದೆ. ಈ ಹಿಂದೆ ಮಲ್ಪೆ ವಡ ಬಾಂಡೇಶ್ವರ ದೇವಸ್ಥಾನದ ಸಮೀಪ ಇರುವ ಮನೆಯೊಂದರಲ್ಲಿ ಅಡುಗೆ ಬಡಿಸಲು ಈತ ಬರುತ್ತಿದ್ದ ಎಂದು ತಿಳಿದುಬಂದಿದೆ. ಇದೇ ಪರಿಚಯದಲ್ಲಿ ಮಲ್ಪೆಗೆ ಆಗಮಿಸಿ ಈ ಕೃತ್ಯ ಎಸಗಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಬಳಿಕ ಆತನನ್ನು ಮಲ್ಪೆ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಆತನನ್ನು ಕಾರ್ಕಳದಲ್ಲಿ ಕೆಲಸ ಮಾಡುತ್ತಿದ್ದ ಹೊಟೇಲ್‌ ಗೆ ಕರೆದೊಯ್ದು ಹೋಗಿ ಮಹಜರು ನಡೆಸಲಾಗುತ್ತದೆ ಎಂದು ಪೊಲೀಸ್ ಮೂಲ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News