ಯುವ ಮತದಾರರು ಸಕ್ರಿಯರಾದರೆ ಭಾರತ ಮತ್ತಷ್ಟು ಬಲಿಷ್ಠ: ದ.ಕ. ಜಿಲ್ಲಾಧಿಕಾರಿ

Update: 2020-01-25 12:34 GMT

ಮಂಗಳೂರು, ಜ. 25: ಭಾರತವು ಅತೀ ಹೆಚ್ಚು ಯುವಜನತೆಯನ್ನು ಹೊಂದಿರುವ ದೇಶವಾಗಿದೆ. ಈ ಯುವಜನತೆಯು ಮತದಾನ ಪ್ರಕ್ರಿಯೆಯಲ್ಲಿಯೂ ಹೆಚ್ಚು ಸಕ್ರಿಯರಾದರೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತಷ್ಟು ಬಲಗೊಳ್ಳುತ್ತದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ.ರೂಪೇಶ್ ಹೇಳಿದರು.

ದ.ಕ ಜಿಲ್ಲಾಡಳಿತ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಶನಿವಾರ ನಗರದ ಪುರಭವನದಲ್ಲಿ ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಪಂಚದಲ್ಲೇ ಭಾರತ ಅತೀ ದೊಡ್ಡ ಪ್ರಜಾಪ್ರಭುತ್ವದ ದೇಶವಾಗಿದೆ. ವರ್ಷದಿಂದ ವರ್ಷಕ್ಕೆ ಪ್ರಗತಿಪಥದಲ್ಲಿ ಭಾರತ ಸಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯು ಮತ್ತಷ್ಟು ಸದೃಢಗೊಳ್ಳಲು ದೇಶದ ಹೆಣ್ಣಕ್ಕಳ ಸಹಿತ ಯುವಜನತೆಯು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕಿದೆ ಎಂದು ಡಿಸಿ ಸಿಂಧೂ ಬಿ. ರೂಪೇಶ್ ನುಡಿದರು.

ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶ ಎ.ಜಿ.ಗಂಗಾಧರ ಮಾತನಾಡಿ, ಯುವಶಕ್ತಿ ಸಮಾಜ ಮತ್ತು ದೇಶಕ್ಕಾಗಿ ಧನಾತ್ಮಕ ಶಕ್ತಿಯನ್ನು ವಿನಿಯೋಗಿಸಬೇಕು. ಜಗತ್ತಿನ ದೃಷ್ಟಿ ಭಾರತದ ಮೇಲಿದೆ. ಎಲ್ಲರೂ ಪ್ರಜಾಪ್ರಭುತ್ವದಲ್ಲಿ ಸಕ್ರಿಯರಾದಾಗ ಉತ್ತಮ ಸರಕಾರ ರಚನೆಗೊಂಡು ಒಳ್ಳೆಯ ಯೋಜನೆಗಳು ಕಾರ್ಯಗತಗೊಳ್ಳಲು ಸಾಧ್ಯ ಎಂದರು.

ಜಿಪಂ ಸಿಇಒ ಡಾ. ಆರ್.ಸೆಲ್ವಮಣಿ ಪ್ರತಿಜ್ಞಾ ವಿಧಿ ಬೋಧಿಸಿದರು. ಮತದಾರರ ನೋಂದಣಾಧಿಕಾರಿ ಮದನ್ ಮೋಹನ್ ಸಿ., ರಥಬೀದಿ ಸರಕಾರಿ ಪ್ರ.ದ.ಕಾಲೇಜಿನ ಪ್ರಾಂಶುಪಾಲ ರಾಜಶೇಖರ್ ಹೆಬ್ಬಾರ್ ಉಪಸ್ಥಿತರಿದ್ದರು.

ಮತದಾರರ ಪಟ್ಟಿಗೆ ಸೇರ್ಪಡೆಯಾದವರಿಗೆ ಬಾರ್‌ಕೋಡ್ ಸಹಿತವಾದ ಹೊಸ ಮತದಾರರ ಗುರುತಿನ ಚೀಟಿಯನ್ನು ಜಿಲ್ಲಾಧಿಕಾರಿಯವರು ಸಾಂಕೇತಿಕವಾಗಿ ವಿತರಿಸಿದರು.

ಜಿಲ್ಲೆಯಲ್ಲಿ 2020ರ ಜ.1ಕ್ಕೆ 18ವರ್ಷ ಪ್ರಾಯ ತುಂಬಿದ 25,189 ಮಂದಿ ಹೊಸ ಯುವ ಮತದಾರರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲಾಗಿದೆ. 18 ವರ್ಷ ಪ್ರಾಯ ಪೂರ್ಣಗೊಂಡರೂ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳದೆ ಇರುವವರನ್ನು ಸೇರ್ಪಡೆಗೊಳ್ಳುವಂತೆ ಪ್ರೇರೇಪಿಸಬೇಕಾಗಿದೆ ಎಂದು ಡಿಸಿ ಕರೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News