ವಿವಾದಾಸ್ಪದ ಟ್ವೀಟ್: ಬಿಜೆಪಿ ಅಭ್ಯರ್ಥಿ ಕಪಿಲ್ ಮಿಶ್ರಾಗೆ 48 ಗಂಟೆ ಪ್ರಚಾರ ನಿಷೇಧ

Update: 2020-01-25 15:37 GMT
facebook.com/KapilMishraAAP

 ಹೊಸದಿಲ್ಲಿ,ಜ.25: ಸಮುದಾಯಗಳ ನಡುವೆ ದ್ವೇಷವನ್ನು ಸೃಷ್ಟಿಸುವ ಟ್ವೀಟ್ ಗಳಿಗಾಗಿ ಚುನಾವಣಾ ಆಯೋಗವು ಬಿಜೆಪಿಯ ಕಪಿಲ್ ಮಿಶ್ರಾ ಅವರಿಂದ ಚುನಾವಣಾ ಪ್ರಚಾರವನ್ನು 48 ಗಂಟೆಗಳ ಅವಧಿಗೆ ನಿಷೇಧಿಸಿದ್ದು,ಶನಿವಾರ ಸಂಜೆ ಐದು ಗಂಟೆಯಿಂದಲೇ ನಿಷೇಧವು ಜಾರಿಗೆ ಬಂದಿದೆ. ಈ ಹಿಂದೆಯೂ ಕೋಮುವಾದಿ ಮತ್ತು ಪ್ರಚೋದನಾಕಾರಿ ಹೇಳಿಕೆ ನೀಡಿರುವ ಮಿಶ್ರಾ ಮುಂದಿನ ತಿಂಗಳು ನಡೆಯಲಿರುವ ದಿಲ್ಲಿ ವಿಧಾನಸಭಾ ಚುನಾವಣೆಗೆ ಮೋದಿ ಟೌನ್ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದಾರೆ.

ದಿಲ್ಲಿಯಲ್ಲಿಯ ‘ಮಿನಿ ಪಾಕಿಸ್ತಾನ ’ಗಳನ್ನು ಪ್ರಸ್ತಾಪಿಸಿದ್ದ ಮಿಶ್ರಾರ ಟ್ವಿಟರ್ ಪೋಸ್ಟ್ ಅತ್ಯಂತ ಆಕ್ಷೇಪಾರ್ಹವಾಗಿದೆ ಮತ್ತು ಕೋಮು ಭಾವನೆಗಳನ್ನು ಕೆರಳಿಸುತ್ತಿದೆ ಎಂದು ಚುನಾವಣಾ ಆಯೋಗವು ಶುಕ್ರವಾರ ಬಣ್ಣಿಸಿತ್ತು. ಬಳಿಕ ಟ್ವಿಟರ್ ಮಿಶ್ರಾರ ಟ್ವೀಟನ್ನೊಂದನ್ನು ತೆಗೆದುಹಾಕಿತ್ತು. ಮಿಶ್ರಾ ವಿರುದ್ಧ ಪೊಲೀಸ್ ಪ್ರಕರಣವೂ ದಾಖಲಾಗಿದೆ.

ಗುರುವಾರ ಪೋಸ್ಟ್ ಮಾಡಿದ್ದ ಟ್ವೀಟ್‌ನಲ್ಲಿ ನೂರಾರು ಮಹಿಳೆಯರು ಮತ್ತು ಮಕ್ಕಳು ಸಿಎಎ ವಿರುದ್ಧ ವಾರಗಳಿಂದಲೂ ಧರಣಿ ಪ್ರತಿಭಟನೆಯನ್ನು ನಡೆಸುತ್ತಿರುವ ಶಾಹೀನ್‌ಬಾಗ್ ಅನ್ನು ಪಾಕಿಸ್ತಾನದ ಪಾಲಿಗೆ ಪ್ರವೇಶ ಕೇಂದ್ರವಾಗಿದೆ ಎಂದು ಹೇಳಿದ್ದರು.

 ಪಾಕಿಸ್ತಾನವು ಶಾಹೀನ್‌ಬಾಗ್ ಮೂಲಕ ಪ್ರವೇಶಿಸುತ್ತ್ತಿದೆ ಮತ್ತು ಶಾಹೀನ್‌ಬಾಗ್,ಚಾಂದ್ ಬಾಗ್, ಇಂದರ್‌ಲೋಕ್ ಹೀಗೆ ದಿಲ್ಲಿಯಲ್ಲಿ ಮಿನಿ ಪಾಕಿಸ್ತಾನಗಳು ಸೃಷ್ಟಿಯಾಗುತ್ತಿವೆ. ಇಲ್ಲಿ ಕಾನೂನುಗಳನ್ನು ಪಾಲಿಸಲಾಗುತ್ತಿಲ್ಲ ಮತ್ತು ಪಾಕಿಸ್ತಾನಿ ದಂಗೆಕೋರರು ರಸ್ತೆಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಅವರು ಟ್ವೀಟಿಸಿದ್ದರು.

ಇದಕ್ಕೂ ಮುನ್ನ ಅವರು ದಿಲ್ಲಿ ಚುನಾವಣೆಯನ್ನು ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧಕ್ಕೆ ಹೋಲಿಸಿದ್ದರು.

ಭಿನ್ನ ಕೋಮಗಳ ನಡುವೆ ದ್ವೇಷ ಮತ್ತು ಉದ್ವಿಗ್ನತೆ ಸೃಷ್ಟಿಸುವುದನ್ನು ನಿಷೇಧಿಸಿರುವ ಚುನಾವಣಾ ಸಂಹಿತೆಯ ನಿಯಮವನ್ನು ಮಿಶ್ರಾ ಉಲ್ಲಂಘಿಸಿದ್ದಾರೆ ಎಂದು ಆಯೋಗವು ಹೇಳಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಿಶ್ರಾ,ತಾನು ಯಾವುದೇ ತಪ್ಪುಮಾತನ್ನು ಹೇಳಿಲ್ಲ. ಸತ್ಯವನ್ನು ನುಡಿಯುವುದು ಈ ದೇಶದಲ್ಲಿ ಅಪರಾಧವಲ್ಲ. ತಾನು ಸತ್ಯವನ್ನು ಹೇಳಿದ್ದೇನೆ ಮತ್ತು ತನ್ನ ಹೇಳಿಕೆಗೆ ಬದ್ಧನಾಗಿದ್ದೇನೆ ಎಂದಿದ್ದಾರೆ.

ಮಾಜಿ ಆಪ್ ಶಾಸಕರಾಗಿರುವ ಮಿಶ್ರಾ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ವಿರುದ್ಧ ಭ್ರಷ್ಟಾಚಾರದ ಬಹಿರಂಗ ಆರೋಪವನ್ನು ಮಾಡಿ ಪಕ್ಷದಿಂದ ಹೊರಬಿದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News