ಗೋವಾದ 'ಫೆಸ್ಟಿವಲ್ ಆಫ್ ಐಡಿಯಾಸ್' ಭಾಷಣಕಾರರ ಪಟ್ಟಿಯಿಂದ ಫೇ ಡಿಸೋಜ ಹೆಸರು ಕೈಬಿಟ್ಟ ಸರಕಾರ

Update: 2020-01-25 14:37 GMT

ಪಣಜಿ: ಪ್ರಶಸ್ತಿ ವಿಜೇತ ಪತ್ರಕರ್ತೆ ಫೇ ಡಿಸೋಜ ಅವರ ಹೆಸರನ್ನು ಜನವರಿ 27ರಂದು ನಡೆಯಲಿರುವ ಡಿಡಿ ಕೋಸಂಬಿ ಫೆಸ್ಟಿವಲ್ ಆಫ್ ಐಡಿಯಾಸ್ ಭಾಷಣಕಾರರ ಪಟ್ಟಿಯಿಂದ ಕೈಬಿಡಲಾಗಿದೆ. 

ಗೋವಾದ ಕಲೆ ಮತ್ತು ಸಂಸ್ಕೃತಿ ಸಚಿವಾಲಯ ಈ ಕಾರ್ಯಕ್ರಮವನ್ನು ಪ್ರತಿ ವರ್ಷ ಆಯೋಜಿಸುತ್ತಿದೆ. ಡಿಸೋಜ ಅವರ ಹೆಸರು ಕೈಬಿಟ್ಟಿರುವ ಕ್ರಮ ಪ್ರಜಾಸತ್ತಾತ್ಮಕವಲ್ಲ ಎಂದು ವಿಪಕ್ಷಗಳು ಟೀಕಿಸಿವೆ.

'ಡಿಸೋಜ ಅವರ ಹೆಸರನ್ನು ಗೊಂದಲ ಮತ್ತು ಅವ್ಯವಸ್ಥೆಯನ್ನು ತಡೆಯಲು ಕೈಬಿಡಲಾಗಿದೆ'' ಎಂದು ಗೋವಾ ಸಂಸ್ಕೃತಿ ಸಚಿವ  ಗೋವಿಂದ್ ಗವಡೆ ಹೇಳಿದ್ದಾರೆ. ಈ ಕಾರ್ಯಕ್ರಮದಲ್ಲಿ  ಭಾಷಣ ನೀಡುವವರ ಪಟ್ಟಿ ಶುಕ್ರವಾರ ಬಿಡುಗಡೆಗೊಳಿಸಲಾಗಿದ್ದು ಅದರಲ್ಲಿ ಒಲಿಂಪಿಕ್ ಪದಕ ವಿಜೇತೆ ಕರ್ಣಂ ಮಲ್ಲೇಶ್ವರಿ, ಪ್ಯಾರಾ ಒಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಹಾಗೂ ಎಂಬಿಎ  ಪದವಿ ಹೊಂದಿದ ಭಾರತದ ಪ್ರಥಮ ಮಹಿಳಾ ಸರಪಂಚೆ ಡಾ. ಛವಿ ರಜಪುತ್ ಸೇರಿದ್ದಾರೆ.

"ಇದೊಂದು ದೊಡ್ಡ ಉತ್ಸವ, ನಾಳೆ ಇಲ್ಲಿ ಗೊಂದಲ ಅಥವಾ ಅವ್ಯವಸ್ಥೆಯಿರಬಾರದು. ನಾವು ವೈರುದ್ಧ್ಯಮಯ ಸ್ಥಿತಿಯಲ್ಲಿರಬಾರದು, ಈ ಆದೇಶ ಮೇಲಿನಿಂದ ಬಂದಿಲ್ಲ, ಪ್ರಧಾನಿ ಮೋದಿ ಹಾಗೂ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಯಾವತ್ತೂ ಸಿಎಎ ಕುರಿತು ಸಂವಾದ ಸ್ವಾಗತಿಸಿದ್ದಾರೆ'' ಎಂದು ಗೋವಿಂದ್ ಗವಡೆ ಅವರು ಹೇಳಿದ್ದಾರೆ.

"ಯಾರನ್ನು ಆಹ್ವಾನಿಸಬೇಕೆಂಬ ಅಂತಿಮ ತೀರ್ಮಾನ ನಮ್ಮದು. ಆಕೆಯ ಹೆಸರೂ ಪಟ್ಟಿಯಲ್ಲಿತ್ತು. ಆದರೆ ಆಕೆ ಸಿಎಎ ವಿರುದ್ಧ ಮಾತನಾಡುತ್ತಾರೆಂದು ನಮಗೆ ತಿಳಿಸಲಾಯಿತು. ಇದೇನು ಸಣ್ಣ ಅಥವಾ ಖಾಸಗಿ ಕಾರ್ಯಕ್ರಮವಲ್ಲ. ಇದೊಂದು ಸರಕಾರಿ ಕಾರ್ಯಕ್ರಮ ಹಾಗೂ ನಮಗೆ ಯಾವುದೇ ವಿವಾದಗಳು ಬೇಡ'' ಎಂದು ಅವರು ಹೇಳಿದರು.

"ಮುಂಬೈಯಲ್ಲಿ ಬೇರೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದುದರಿಂದ ಗೋವಾ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ್ದೇನೆ'' ಎಂದು ಫೇ ಡಿಸೋಜ ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News