ನಿರ್ಭಯಾ ಪ್ರಕರಣ: ದೋಷಿ ಮುಕೇಶ್ ನಿಂದ ಸುಪ್ರೀಂ ಕೋರ್ಟ್‌ಗೆ ಮತ್ತೆ ಅರ್ಜಿ

Update: 2020-01-25 15:22 GMT

ಹೊಸದಿಲ್ಲಿ,ಜ. 25: ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ ನೇಣುಗಂಬವನ್ನೇರಲಿರುವ ನಾಲ್ವರು ದೋಷಿಗಳ ಪೈಕಿ ಓರ್ವನಾಗಿರುವ ಮುಕೇಶ್ ಸಿಂಗ್ ತನ್ನ ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರ ಕ್ರಮದ ನ್ಯಾಯಾಂಗ ಪುನರ್‌ಪರಿಶೀಲನೆಯನ್ನು ಕೋರಿ ಶನಿವಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ.

ಕ್ಷಮಾದಾನ ಕೋರಿ ಮುಕೇಶ್ ಸಲ್ಲಿಸಿದ್ದ ಅರ್ಜಿಯನ್ನು ರಾಷ್ಟ್ರಪತಿಗಳು ನಾಲ್ಕೇ ದಿನಗಳಲ್ಲಿ,ಜ.17ರಂದು ತಿರಸ್ಕರಿಸಿದ್ದರು. ಹಿಂದೆಂದೂ ಇಷ್ಟೊಂದು ತ್ವರಿತ ಗತಿಯಲ್ಲಿ ಕ್ಷಮಾದಾನ ಅರ್ಜಿಯ ಕುರಿತು ರಾಷ್ಟ್ರಪತಿಗಳು ನಿರ್ಧಾರವನ್ನು ಕೈಗೊಂಡಿರಲಿಲ್ಲ. ಇದಾದ ಬಳಿಕ ನಾಲ್ವರೂ ದೋಷಿಗಳನ್ನು ಫೆ.1ರಂದು ಗಲ್ಲಿಗೇರಿಸುವಂತೆ ನ್ಯಾಯಾಲಯವು ಹೊಸದಾಗಿ ಡೆತ್ ವಾರಂಟ್‌ನ್ನು ಹೊರಡಿಸಿದೆ.

2014ರಲ್ಲಿ ಶತ್ರುಘ್ನ ಚೌಹಾಣ್ ವಿರುದ್ಧ ಭಾರತ ಸರಕಾರ ಪ್ರಕರಣದ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ಮಾರ್ಗಸೂಚಿಗಳನ್ನು ಈಗ ಮುಕೇಶ್ ನಂಬಿಕೊಂಡಿದ್ದಾನೆ ಮತ್ತು ತನ್ನ ಕ್ಷಮಾದಾನ ಅರ್ಜಿಯನ್ನು ರಾಷ್ಟ್ರಪತಿಗಳು ತಿರಸ್ಕರಿಸಿರುವ ರೀತಿಯನ್ನು ಪ್ರಶ್ನಿಸಿದ್ದಾನೆ ಎಂದು ತಿಳಿಸಲಾಗಿದೆ.

ಮುಕೇಶ್ ಅರ್ಜಿ ಸಲ್ಲಿಸುವ ಮುನ್ನ ಬೆಳಿಗ್ಗೆ ಸ್ಥಳೀಯ ನ್ಯಾಯಾಲಯವೊಂದು ತನ್ನ ಕಕ್ಷಿದಾರರ ಪರವಾಗಿ ಪರಿಹಾರಾತ್ಮಕ ಮತ್ತು ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಲು ತಿಹಾರ ಜೈಲಿನ ಅಧಿಕಾರಿಗಳಿಂದ ಹೆಚ್ಚುವರಿ ದಾಖಲೆಗಳನ್ನು ಕೋರಿ ಇತರ ಮೂವರು ದೋಷಿಗಳ ಪರ ವಕೀಲರು ಸಲ್ಲಿಸಿದ್ದ ಅರ್ಜಿನ್ನು ವಿಲೇವಾರಿಗೊಳಿಸಿತು. ಅಧಿಕಾರಿಗಳ ಬಳಿ ಯಾವುದೇ ದಾಖಲೆಗಳು ಬಾಕಿಯುಳಿದಿಲ್ಲ ಮತ್ತು ಎಲ್ಲ ದಾಖಲೆಗಳನ್ನು ಪ್ರತಿವಾದಿಗಳ ಪರ ವಕೀಲರ ತಂಡಕ್ಕೆ ನೀಡಲಾಗಿದೆ. ಈಗ ಯಾವುದೇ ನಿರ್ದೇಶದ ಅಗತ್ಯವಿಲ್ಲ ಎಂದು ನ್ಯಾ.ಎ.ಕೆ.ಜೈನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News