ಪಾಕಿಸ್ತಾನ ಬಾಂಗ್ಲಾದೇಶಗಳ ಮುಸ್ಲಿಮ್ ನುಸುಳುಕೋರರನ್ನು ಹೊರದಬ್ಬಲೇಬೇಕು: ಶಿವಸೇನೆ

Update: 2020-01-25 15:24 GMT

ಮುಂಬೈ,ಜ.25: ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮ್ ನುಸುಳುಕೋರರನ್ನು ಹೊರದಬ್ಬಲೇಬೇಕು ಎಂದು ಶಿವಸೇನೆಯು ಶನಿವಾರ ಹೇಳಿದೆ.

ಮರಾಠಿ ಸಿದ್ಧಾಂತದಿಂದ ಹಿಂದುತ್ವ ಸಿದ್ಧಾಂತಕ್ಕೆ ಬದಲಾಗಿರುವುದಕ್ಕಾಗಿ ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಟೀಕಿಸಿರುವ ಶಿವಸೇನೆಯ ಮುಖವಾಣಿ ‘ಸಾಮನಾ’ದ ಸಂಪಾದಕೀಯವು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ. ಗುರುವಾರ ಎಂಎನ್‌ಎಸ್‌ನ ನೂತನ ಧ್ವಜವನ್ನು ಅನಾವರಣಗೊಳಿಸಿದ್ದ ರಾಜ್ ಠಾಕ್ರೆ,ಪಾಕಿಸ್ತಾನಿ ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ತೆರವುಗೊಳಿಸಲೇಬೇಕು ಮತ್ತ ಈ ವಿಷಯದಲ್ಲಿ ತಾನು ನರೇಂದ್ರ ಮೋದಿ ಸರಕಾರವನ್ನು ಬೆಂಬಲಿಸುತ್ತೇನೆ ಎಂದು ಹೇಳಿದ್ದರು.

ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಮುಸ್ಲಿಮ್ ನುಸುಳುಕೋರರನ್ನು ದೇಶದಿಂದ ಹೊರಕ್ಕೆ ಹಾಕಬೇಕು ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅದಕ್ಕಾಗಿ ಪಕ್ಷವು ತನ್ನ ಧ್ವಜವನ್ನು ಬದಲಿಸಿರುವುದು ಮೋಜಿನ ವಿಷಯವಾಗಿದೆ ಎಂದಿರುವ ಸಾಮನಾ ಸಂಪಾದಕೀಯವು,ರಾಜ್ ಠಾಕ್ರೆ 14 ವರ್ಷಗಳ ಹಿಂದೆ ಮರಾಠಿ ಸಿದ್ಧಾಂತಕ್ಕಾಗಿ ಪಕ್ಷವನ್ನು ಸ್ಥಾಪಿಸಿದ್ದರು,ಆದರೆ ಈಗ ಅದು ಹಿಂದುತ್ವಕ್ಕೆ ತನ್ನ ಪಥವನ್ನು ಬದಲಿಸಿದೆ. ಬಿಜೆಪಿಗೆ ಸಮೀಪವಾದ ಬಳಿಕ ಈಗಲಾದರೂ ಏನಾದರೂ ಲಾಭ ಪಡೆಯಲು ಅವರಿಗೆ ಸಾಧ್ಯವಾಗುತ್ತದೆ ಎನ್ನುವ ಹೆಚ್ಚಿನ ಆಸೆಯಿಲ್ಲ ಎಂದು ಬರೆದಿದೆ.

 ಆದರೆ ಸಿಎಎಯಲ್ಲಿ ಅನೇಕ ಲೋಪದೋಷಗಳಿವೆ ಎಂದಿರುವ ಸಂಪಾದಕೀಯವು,ಕಾಯ್ದೆಯ ಕುರಿತು ತನ್ನ ನಿಲುವನ್ನು ರಾಜ್ ಹೇಗೆ ಬದಲಿಸಿದರು ಎನ್ನುವುದನ್ನು ಬೆಟ್ಟು ಮಾಡಿದೆ. ಸಿಎಎ ಅನ್ನು ಬೆಂಬಲಿಸಬೇಕು ಮತ್ತು ಅದಕ್ಕಾಗಿ ತಾನು ಜಾಥಾವೊಂದನ್ನು ನಡೆಸುತ್ತೇನೆ ಎಂದು ರಾಜ್ ಗುರುವಾರ ಹೇಳಿದ್ದಾರೆ. ಆದರೆ ಇದೇ ರಾಜ್ ಒಂದು ತಿಂಗಳ ಹಿಂದಷ್ಟೇ ಕಾಯ್ದೆಯನ್ನು ವಿರೋಧಿಸಿದ್ದರು. ಬೆಲೆಯೇರಿಕೆ ಮತ್ತು ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳಿಂದ ಜನತೆಯ ಗಮನವನ್ನು ಬೇರೆಡೆಗೆ ಸೆಳೆಯಲು ಗೃಹಸಚಿವ ಅಮಿತ್ ಶಾ ಈ ಕಾಯ್ದೆಯನ್ನು ತಂದಿದ್ದಾರೆ ಎಂದು ಅವರು ಹೇಳಿದ್ದರು ಎಂದು ಶಿವಸೇನೆ ಹೇಳಿದೆ.

ಶಿವಸೇನೆಗೆ ಎದುರಾಗಿ ಎಂಎನ್‌ಎಸ್‌ನ್ನು ಬೆಳೆಸಲು ಬಿಜೆಪಿ ಆಸಕ್ತವಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ ಕೆೆಲವು ವಾರಗಳಲ್ಲಿ ಹಲವಾರು ಬಿಜೆಪಿ ನಾಯಕರು ರಾಜ್ ಜೊತೆ ಮಾತುಕತೆಗಳನ್ನು ನಡೆಸಿದ್ದಾರೆ. ಅಕ್ಟೋಬರ್‌ನಲ್ಲಿ ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಎಂಎನ್‌ಎಸ್‌ಗೆ ಕೇವಲ ಒಂದು ಸ್ಥಾನ ದಕ್ಕಿದೆ. ಸಾರ್ವತ್ರಿಕ ಚುನಾವಣೆಗಳ ಸಂದರ್ಭ ರಾಜ್ ಪ್ರಧಾನಿ ಮೋದಿ ಮತ್ತು ಶಾ ಅವರ ಕಟು ಟೀಕಾಕಾರರಲ್ಲೊಬ್ಬರಾಗಿದ್ದರು. ಆ ಚುನಾವಣೆಯಲ್ಲಿ ಎಂಎನ್‌ಎಸ್ ಸ್ಪರ್ಧಿಸಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News