‘ದೇಶದ ಆರ್ಥಿಕ ಸ್ಥಿರತೆಯಲ್ಲಿ ಲೆಕ್ಕಪರಿಶೋಧಕರ ಪಾತ್ರವೂ ಮುಖ್ಯ’

Update: 2020-01-25 15:27 GMT

ಮಣಿಪಾಲ, ಜ.25: ದೇಶದ ಆರ್ಥಿಕ ಪರಿಸ್ಥಿತಿ ಸ್ಥಿರತೆಯನ್ನು ಕಾಣಲು ಲೆಕ್ಕಪರಿಶೋಧಕರ ಪಾತ್ರವೂ ಮುಖ್ಯವಾಗಿರುತ್ತದೆ. ಅದೇ ರೀತಿ ದೇಶ ಕಟ್ಟುವಲ್ಲಿ ಇವರಿಗೂ ಬಹುಮುಖ್ಯ ಪಾತ್ರವಿರುತ್ತದೆ ಎಂದು ನಂದಿಕೂರಿನ ಅದಾನಿ ಯುಪಿಸಿಎಲ್‌ನ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಅಭಿಪ್ರಾಯ ಪಟ್ಟಿದ್ದಾರೆ.

ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಉಡುಪಿ ಶಾಖೆಯು ಮಣಿಪಾಲದ ಡಾ.ಟಿಎಂಎ ಪೈ ಸಭಾಂಗಣದಲ್ಲಿ ಆಯೋಜಿಸಿದ್ದ ಮೊತ್ತ ಮೊದಲ ವಾರ್ಷಿಕ ಸಮ್ಮೇಳನ ಹಾಗೂ ಲೆಕ್ಕಪರಿಶೋಧಕರ ನಿರಂತರ ಕಲಿಕೆಗಾಗಿ ಆಯೋಜಿಸಿದ ‘ಜ್ಞಾನ ಸಮ್ಮಿಲನ- ಜ್ಞಾನಕ್ಕಾಗಿ ನಿರಂತರ ಶಿಕ್ಷಣ’ವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಆರ್ಥಿಕ ಹಾಗೂ ಹಣಕಾಸಿನ ಸಂಬಂಧಿಸಿದ ಪ್ರತಿಯೊಂದು ಕ್ಷೇತ್ರದಲ್ಲೂ ಇಂದು ಸಿಎಗಳು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ದೇಶ ಕಟ್ಟುವಲ್ಲಿ ಸಿಎಗಳ ಸೇವೆ ಅತ್ಯಗತ್ಯ ಎಂದು ಇತ್ತೀಚೆಗೆ ಪ್ರಧಾನಮಂತ್ರಿಗಳೇ ಹೇಳಿದ್ದಾರೆ. ಜಿಎಸ್‌ಟಿಯನ್ನು ದೇಶಾದ್ಯಂತ ಅನುಷ್ಠಾನಗೊಳಿಸುವಲ್ಲಿ, ಅದರ ನಿಯಮಗಳ ಸರಳೀಕರಣದಲ್ಲೂ ಇವರು ಬಹುದೊಡ್ಡ ಪಾತ್ರ ವಹಿಸುತಿದ್ದಾರೆ ಎಂದೂ ಕಿಶೋರ್ ಆಳ್ವ ಹೇಳಿದರು.

ದೇಶದ ಆರ್ಥಿಕ, ಹಣಕಾಸು, ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಲೆಕ್ಕ ಪರಿಶೋಧಕರು ಪೂರಕವಾಗಿರುತ್ತಾರೆ. ದೇಶದ ಆರ್ಥಿಕತೆಯ ಆಧಾರ ಸ್ತಂಭ ಇವರಾಗಿರುವುದರಿಂದ ಇವರಿಗೆ ಸಾಮಾಜಿಕ ಜವಾಬ್ದಾರಿಯೂ ವಿಶೇಷವಾಗಿದೆ ಎಂದು ಅವರು ನುಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿಯ ಕೇಂದ್ರೀಯ ತೆರಿಗೆ ಸಹಾಯಕ ಆಯುಕ್ತ ತಂದಾಳೆ ಕಿಶೋರ್ ಅವರು ಮಾತನಾಡಿ, ಲೆಕ್ಕ ಪರಿಶೋಧಕರು ದೇಶದ ಆರ್ಥಿಕತೆಗೆ ವೈದ್ಯರಿದ್ದಂತೆ. ದೇಶದ ಹಣಕಾಸಿನ ಪರಿಸ್ಥಿತಿ ಸುಧಾರಿಸದೇ ಇದ್ದರೆ ದೇಶದ ಆಡಳಿತ ನಡೆಸುವುದು ಸಾಧ್ಯವಾಗುವುದಿಲ್ಲ. ಹೀಗಾಗಿ ಇದರಲ್ಲಿ ಸಿಎಗಳ ಪಾತ್ರ ಹಿರಿದು ಎಂದರು.

ಕಾರ್ಯಕ್ರಮದಲ್ಲಿ ಬೆಂಗಳೂರಿನ ಹಿರಿಯ ಲೆಕ್ಕಪರಿಶೋಧಕಿ ಗೀತಾ ಎ.ಬಿ., ಉಡುಪಿ ಶಾಖೆಯ ಪದಾಧಿಕಾರಿಗಳಾದ ಕಾರ್ಯ ದರ್ಶಿ ಕವಿತಾ ಎಂ.ಪೈ, ಉಪಾಧ್ಯಕ್ಷ ಪ್ರದೀಪ್ ಜೋಗಿ, ಖಜಾಂಚಿ ಲೋಕೇಶ್ ಶೆಟ್ಟಿ, ಸಿಕಾಸಾದ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಉಡುಪಿ ಶಾಖೆಯ ಅಧ್ಯಕ್ಷ ನರಸಿಂಹ ನಾಯಕ್ ಅತಿಥಿಗಳನ್ನು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿದರೆ, ಆಂಡ್ರಿಯಾ ಲೂವಿಸ್ ಹಾಗೂ ಪವನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News