ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ ಸದಾ ಸ್ಪಂದಿಸುವ ಸಂಸ್ಥೆ: ರಾಜೇಂದ್ರ ಕುಮಾರ್

Update: 2020-01-25 15:37 GMT

ಬೆಳ್ತಂಗಡಿ: ಸಹಕಾರ ಸಂಘಗಳು ಗ್ರಾಮೀಣ ಪ್ರದೇಶದ ಜನರ ಅಗತ್ಯಗಳಿಗೆ ಸದಾ ಸ್ಪಂದಿಸುವ ಸಂಸ್ಥೆಗಳಾಗಿದ್ದು ಅವು ಗ್ರಾಮೀಣ ಆರ್ಥಿಕ ವ್ಯವಸ್ಥೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ದ.ಕ.ಜಿ.ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಹೇಳಿದರು.

ಅವರು ಶನಿವಾರ ಬೆಳ್ತಂಗಡಿಯಲ್ಲಿ ನೂತನವಾಗಿ ಆರಂಭಗೊಂಡ  ಶ್ರೀ ಪ್ರಿಯದರ್ಶಿನಿ ಸೌಹಾರ್ದ ಸಹಕಾರಿ ಇದರ ಉದ್ಘಾಟನೆ ಯನ್ನು ನೆರವೇರಿಸಿ ಮಾತನಾಡಿದರು.

ಸರಕಾರಗಳು ಸಹಕಾರಿ ಸಂಘಗಳಿಗೆ ನೆರವಾಗುವ ಬದಲು ಅನಗತ್ಯ ತೆರಿಗೆಗಳನ್ನು ಹಾಕುವ ಮೂಲಕವಾಗಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ ಎಂದ ಅವರು ಸಮಾಜದ ಎಲ್ಲ ವರ್ಗದ ಜನರನ್ನೂ ಒಟ್ಟು ಸೇರಿಸಿಕೊಂಡು ಆರಂಭಿಸಿರುವ ಈ ಸಹಕಾರಿ ಸಂಘ ತನ್ನ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಮೂಲಕವಾಗಿ ಇನ್ನಷ್ಟು ವಿಸ್ತಾರವಾಗಿ ಬೆಳೆಯಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ  ಕೆ ಹರೀಶ ಕುಮಾರ್ ವಹಿಸಿದ್ದರು.  ಮಾಜಿ ಸಚಿವ ಬಿ ರಮಾನಾಥ ರೈ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಿ ಮಾತನಾಡಿ ರಾಷ್ಟ್ರೀಕೃತ ಬ್ಯಾಂಕ್‍ಗಳ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಸಹಕಾರಿ ಸಂಘಗಳು ಜನರಿಗೆ ಇನ್ನಷ್ಟು ಹತ್ತಿರವಾಗಬೇಕಾಗಿದೆ ಎಂದರು.

ಬೆಳ್ತಂಗಡಿ ಚರ್ಚ್ ಧರ್ಮಗುರು ಬೊನವೆಂಚರ್ ನಝರತ್ ಗಣಕಯಂತ್ರ ಉದ್ಘಾಟಿಸಿ ಶುಭ ಹಾರೈಸಿದರು. ಉದ್ಯಮಿ ರಮಾನಂದ ಸಾಲಿಯಾನ್ ಪಾಲು ಬಂಡವಾಳದ ಪತ್ರ ವಿತರಣೆ ಮಾಡಿದರು.

ವೇದಿಕೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ನಿರಂಜನ ಬಾವಂತಬೆಟ್ಟು, ಗುರುನಾರಾಯಣ ಸೇವಾಸಂಘದ ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪದ್ಮನಾಭ ಮಾಣಿಂಜ, ಬಂಟರ ಯಾನೆ ನಾಡವರ ಸಂಘದ ತಾಲೂಕು ಅಅಧ್ಯಕ್ಷ ಜಯರಾಮ ಶೆಟ್ಟಿ, ಗೌಡರ ಯಾನೆ ಒಕ್ಕಲಿಗರ ಸೇವಾಸಂಘದ ತಾಲೂಕು ಅಧ್ಯಕ್ಷ ಜಿ. ಸೋಮೇಗೌಡ, ಸಂಘದ ಉಪಾಧ್ಯಕ್ಷ ಗಂಗಾಧರ ಮಿತ್ತಮಾರು, ಹಾಗೂ ನಿರ್ಧೇಶಕರುಗಳು ಇದ್ದರು. ಅಜಿತ್ ಕುಮಾರ್ ಕರ್ಯಕ್ರಮ ನಿರೂಪಿಸಿದರು. ನಿರ್ದೇಶಕ ರಾಮಚಂದ್ರ ಗೌಡ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News