ರಾಜ್ಯಪಾಲರ ವಾಪಸಾತಿಗೆ ರಾಷ್ಟ್ರಪತಿಗೆ ಆಗ್ರಹಿಸಿ ನಿರ್ಣಯಕ್ಕೆ ಕೇರಳ ಪ್ರತಿಪಕ್ಷದ ಪ್ರಸ್ತಾವ

Update: 2020-01-25 15:55 GMT

ತಿರುವನಂತಪುರ,ಜ.25: ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ವಾಪಸ್ ಕರೆಸಿಕೊಳ್ಳುವಂತೆ ರಾಷ್ಟ್ರಪತಿಗಳನ್ನು ಆಗ್ರಹಿಸಿ ನಿರ್ಣಯವನ್ನು ಮಂಡಿಸಲು ಅನುಮತಿ ನೀಡುವಂತೆ ಕೇರಳದ ಪ್ರತಿಪಕ್ಷ ಯುಡಿಎಫ್ ಶನಿವಾರ ರಾಜ್ಯ ವಿಧಾನಸಭಾ ಸ್ಪೀಕರ್ ಅವರನ್ನು ಕೋರಿಕೊಂಡಿದೆ.

ರಾಜ್ಯ ಸರಕಾರವು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದೆ. ಸಿಎಎ ರದ್ದತಿಗೆ ಆಗ್ರಹಿಸಿ ರಾಜ್ಯ ವಿಧಾನಸಭೆಯಲ್ಲಿ ನಿರ್ಣಯವೂ ಅಂಗೀಕಾರಗೊಂಡಿದೆ. ಆದರೆ ಕೇಂದ್ರದ ಕಾನೂನನ್ನು ಎಲ್ಲ ರಾಜ್ಯಗಳು ಜಾರಿಗೊಳಿಸಬೇಕಾಗುತ್ತದೆ ಎಂದು ಖಾನ್ ಪ್ರತಿಪಾದಿಸುತ್ತಲೇ ಬಂದಿದ್ದಾರೆ.

ಖಾನ್ ಅವರು ಶಾಸಕಾಂಗದ ಘನತೆಯನ್ನು ಬಹಿರಂಗವಾಗಿ ಪ್ರಶ್ನಿಸುವ ಮೂಲಕ ಎಲ್ಲ ಪ್ರಜಾಸತ್ತಾತ್ಮಕ ತತ್ತ್ವಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿರುವ ಪ್ರತಿಪಕ್ಷ ನಾಯಕ ರಮೇಶ ಚೆನ್ನಿತ್ತಲ ಅವರು, ವಿಧಾನಸಭೆಯಲ್ಲಿರುವ ಬಿಜೆಪಿಯ ಏಕೈಕ ಸದಸ್ಯ ಕೂಡ ಸದನವು ಅಂಗೀಕರಿಸಿರುವ ನಿರ್ಣಯದ ವಿರುದ್ಧ ಮತ ಚಲಾಯಿಸಿರಲಿಲ್ಲ,ಆದರೆ ಅದು ಅಸಾಂವಿಧಾನಿಕ ಎಂದು ರಾಜ್ಯಪಾಲರು ಬಹಿರಂಗ ಹೇಳಿಕೆಗಳನ್ನು ನೀಡಿದ್ದಾರೆ ಎಂದಿದ್ದಾರೆ. ಚೆನ್ನಿತ್ತಲರ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಖಾನ್,‘ಇಂತಹ ಹೇಳಿಕೆಗಳು ಪ್ರತಿಕ್ರಿಯೆಗೆ ಅರ್ಹ ಎಂದು ನಾನು ಭಾವಿಸಿಲ್ಲ. ಆದರೆ ನಾನು ಬಾಯಿ ತೆರೆಯುವ ಮುನ್ನ ನನ್ನ ಪಾತ್ರ ಮತ್ತು ಕರ್ತವ್ಯಗಳ ಬಗ್ಗೆ ತಿಳಿದುಕೊಳ್ಳಲು ಸಂವಿಧಾನ ಮತ್ತು ಕಾನೂನನ್ನು ಓದುತ್ತೇನೆ ’ ಎಂದರು.

ಆದರೆ ತನ್ನ ವಿರುದ್ಧ ಪ್ರತಿಪಕ್ಷದ ಕ್ರಮವನ್ನು ಸ್ವಾಗತಿಸಿದ ಅವರು,‘ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಹಕ್ಕು ಇದೆ. ನಾನು ರಾಜ್ಯದ ಸಾಂವಿಧಾನಿಕ ಮುಖ್ಯಸ್ಥನಾಗಿದ್ದೇನೆ. ಸರಕಾರಕ್ಕೆ ಸಲಹೆ,ಉತ್ತೇಜನ ಮತ್ತು ಎಚ್ಚರಿಕೆ ನೀಡುವುದು ನನ್ನ ಕರ್ತವ್ಯವಾಗಿದೆ ’ಎಂದರು.

ತನ್ನೊಂದಿಗೆ ಸಮಾಲೋಚಿಸದೆ ಸಿಎಎ ವಿರುದ್ಧ ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲನ್ನೇರುವ ಸರಕಾರದ ನಿರ್ಧಾರದ ವಿರುದ್ದ ಖಾನ್ ಅಸಂತೋಷವನ್ನು ವ್ಯಕ್ತಪಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News