ಶಂಕಿತ ಉಗ್ರ ಆದಿತ್ಯ ರಾವ್‌ನ ಬ್ಯಾಂಕ್ ಲಾಕರ್‌ನಲ್ಲಿ ಸೈನೈಡ್ ಪತ್ತೆ

Update: 2020-01-25 16:47 GMT

ಉಡುಪಿ, ಜ.25: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸಿದ್ದ ಶಂಕಿತ ಉಗ್ರ ಆದಿತ್ಯ ರಾವ್‌ನನ್ನು ತನಿಖೆಯ ಸಂದರ್ಭದಲ್ಲಿ ನೀಡಿದ ಮಾಹಿತಿ ಯಂತೆ ಉಡುಪಿ ಕುಂಜಿಬೆಟ್ಟುವಿನಲ್ಲಿ ಕರ್ಣಾಟಕ ಬ್ಯಾಂಕಿನ ಕುಂಜಿಬೆಟ್ಟು ಶಾಖೆಗೆ ಇಂದು ಕರೆ ತಂದು ಸ್ಥಳ ಮಹಜರು ನಡೆಸಲಾಯಿತು.

ಮಂಗಳೂರು ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಉಡುಪಿ ಪೊಲೀಸರ ಸಹಕಾರದೊಂದಿಗೆ ಕುಂಜಿಬೆಟ್ಟು ಶಾಖೆಗೆ ಕರೆ ತಂದು, ಆತನ ಬ್ಯಾಂಕ್ ಲಾಕರನ್ನು ಪರಿಶೀಲನೆ ನಡೆಸಿದೆ. ಇಂದು ಬ್ಯಾಂಕಿಗೆ ರಜೆ ಇದ್ದುದರಿಂದ ಯಾವುದೇ ಸಮಸ್ಯೆ ಇಲ್ಲದೆ ಕಚೇರಿಯ ಮುಂದಿನ ಶಟರ್ ಹಾಕಿ ಒಳಗಡೆ ಮಹಜರು ಪ್ರಕ್ರಿಯೆ ನಡೆಸಲಾಯಿತು. ಸುಮಾರು ಎರಡು ಗಂಟೆಗಳ ಕಾಲ ಬ್ಯಾಂಕ್ ಒಳಗೆ ಆದಿತ್ಯ ರಾವ್‌ನನ್ನು ವಿಚಾರಣೆಗೆ ಒಳಪಡಿಸಲಾಯಿತು.

ಆದಿತ್ಯ ರಾವ್ ಬಳಿ ಲಾಕರ್‌ನ ಕೀ ಇಲ್ಲದ ಕಾರಣ ಲಾಕರನ್ನು ಒಡೆದು ತೆರೆಯಲಾಯಿತು. ಅದರಲ್ಲಿ ಆತ ಸ್ಟೀಲ್ ಬಾಕ್ಸ್‌ನಲ್ಲಿ ತಂದಿರಿಸಿದ್ದ ಎರಡು ಸೈನೈಡ್ ಗಳು ಪತ್ತೆಯಾಗಿವೆ ಎಂದು ಖಚಿತ ಮೂಲಗಳು ತಿಳಿಸಿವೆ. ಇದನ್ನು ಪೊಲೀಸರು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನಲ್ಲಿ ಹುಸಿ ಕರೆ ಮಾಡಿ ಬಂಧಿತ ನಾಗಿದ್ದು, ಬಿಡುಗಡೆಯಾದ ನಂತರ ಆತ ಜೀವನದಲ್ಲಿ ಜಿಗುಪ್ಸೆ ಹೊಂದಿ ಆನ್ ಲೈನ್ ಮೂಲಕ ಸೈನೈಡ್ ಖರೀದಿಸಿ, ತನ್ನ ಬ್ಯಾಂಕ್ ಲಾಕರ್‌ನಲ್ಲಿ ಇರಿಸಿದ್ದ ಎನ್ನಲಾಗಿದೆ. ಉಳಿದಂತೆ ಈ ಲಾಕರ್‌ನಲ್ಲಿ ಯಾವುದೇ ದಾಖಲೆಗಳು ಪತ್ತೆ ಯಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕಾರ್ಕಳದಲ್ಲೂ ಸ್ಥಳ ಮಹಜರು

ಉಡುಪಿ, ಮಲ್ಪೆಯ ಬಳಿಕ ಮಧ್ಯಾಹ್ನದ ನಂತರ ಆದಿತ್ಯ ರಾವ್‌ನನ್ನು ಆತ ಕೆಲಸಕ್ಕೆ ಇದ್ದ ಹಾಗೂ ಸ್ಪೋಟಕ ತಯಾರಿಸಿದ್ದ ಕಾರ್ಕಳದ ಹೊಟೇಲಿಗೆ ಕರೆದುಕೊಂಡು ಹೋಗಿ ಸ್ಥಳ ಮಹಜರು ಮಾಡಲಾಯಿತು.

ಆದಿತ್ಯ ರಾವ್ ವಿಮಾನ ನಿಲ್ದಾಣದಲ್ಲಿ ಸ್ಪೋಟಕ ಇರಿಸುವ ಒಂದು ದಿನದ ಹಿಂದೆ ಕಾರ್ಕಳದ ಹೊಟೇಲೊಂದರಲ್ಲಿ ಕೆಲಸಕ್ಕೆ ಸೇರಿ, ಅಲ್ಲೇ ಸ್ಪೋಟಕಗಳನ್ನು ತಯಾರಿಸಿದ್ದ ಎನ್ನಲಾಗಿದೆ. ಈ ಸಂಬಂಧ ಹೊಟೇಲಿಗೆ ಕರೆದುಕೊಂಡು ಬಂದ ಪೊಲೀಸರು ಆತನಿಂದ ಸ್ಥಳ ಮಹಜರು ನಡೆಸಿ, ಬಳಿಕ ಆತನನ್ನು ಮಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News