ಮತದಾರ ಜಾಗೃತನಾದಾಗ ಸಮರ್ಥ ಆಡಳಿತಗಾರ ಆಯ್ಕೆಗೊಳ್ಳುತ್ತಾನೆ: ಶಿವಪೂಜಿ

Update: 2020-01-25 17:07 GMT

ಭಟ್ಕಳ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬರ ಹಕ್ಕಾಗಿದ್ದು ಮತದಾರ ಜಾಗೃತನಾಗಿ ಸಮರ್ಥ ಆಡಳಿತಗಾರ ನನ್ನು ಆಯ್ಕೆ ಮಾಡುತ್ತಾನೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಭಟ್ಕಳ ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷ ಜಗದೀಶ ಶಿವಪೂಜಿ ಹೇಳಿದರು.

ಅವರು ಶನಿವಾರ ಇಲ್ಲಿನ ಸಾಗರ ರಸ್ತೆಯ ನ್ಯೂ ಇಂಗ್ಲಿಷ್ ಪಿ.ಯು ಕಾಲೇಜ್ ನಲ್ಲಿ ಜರಗಿದ 10ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಮತದಾನ  ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬ ನಾಗರಿಕನ ಹಕ್ಕು. ಈ ಹಕ್ಕನ್ನು ಸರಿಯಾಗಿ ಚಲಾಯಿಸುವ ಮೂಲಕ ಪ್ರಜಾಪ್ರಭುತ್ವ ವನ್ನು ಬಲಪಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ರಾಷ್ಟ್ರೀಯ ಮತದಾರರ ದಿನದ ಕುರಿತು ಉಪನ್ಯಾಸ ನೀಡಿದ ಪ್ರಾರ್ಥನಾ ಪ್ರತಿಷ್ಠಾನದ ಅಧ್ಯಕ್ಷ ಗಂಗಾಧರ ನಾಯ್ಕ, ಪ್ರಪಂಚದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮತದಾನದ ಹಕ್ಕನ್ನು ಪಡೆಯುವುದೇ ದೊಡ್ಡ ಗೌರವ. ನಮ್ಮನ್ನು ಆಳುವವರನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಮತದಾನ ಮಾಡುವ ಪ್ರಾಥಮಿಕ ಹಕ್ಕನ್ನು ಸರಿಯಾಗಿ ಚಲಾಯಿಸಿ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು. ನಾವು ಮತದಾನ ಮಾಡುವುದರ ಜೊತೆ ಮತದಾನ ಮಾಡುವಂತೆ ಎಲ್ಲರನ್ನು ಪ್ರೇರೇಪಿಸುವ ಕೆಲಸವನ್ನೂ ಮಾಡಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಹಾಯಕ ಆಯುಕ್ತ ಸಾಜಿದ್ ಅಹ್ಮದ್ ಮುಲ್ಲಾ ಮಾತನಾಡಿ, ಸಂವಿಧಾನ ನೀಡಿದ ಮತದಾನದ ಹಕ್ಕನ್ನು ಯುವ ಮತ್ತು ಭಾವಿ ಮತದಾರರು ಚಲಾಯಿಸಿ ವ್ಯವಸ್ಥೆಯನ್ನು ರೂಪಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕೆಂದರು.

ವಕೀಲರ ಸಂಘದ ಅಧ್ಯಕ್ಷ ಆರ್.ಆರ್.ಶ್ರೇಷ್ಟಿ, ಸಿಪಿಐ ಪ್ರಕಾಶ್ ಮಾತನಾಡಿದರು. ಪ್ರಾಂಶುಪಾಲ ವೀರೇಂದ್ರ ಶಾನಭಾಗ ಪ್ರತಿಜ್ಞಾ ವಿಧಿ ಬೋಧಿಸಿದರು.

ಈ ಸಂದರ್ಭ ಹೊಸದಾಗಿ ಮತದಾರರ ಪಟ್ಟಿಗೆ ಸೇರಿದ ಮತದಾರರ ಗುರುತಿನ ಚೀಟಿಯನ್ನು ವಿತರಿಸಲಾಯಿತು. ರಾಷ್ಟ್ರೀಯ ಮತದಾರರ ದಿನದ  ಪ್ರಯುಕ್ತ ವಿದ್ಯಾರ್ಥಿಗಳಿಗಾಗಿ ನಡೆಸಿದ ಪ್ರಬಂಧ ಮತ್ತು ವಿವಿಧ ಸ್ಪರ್ಧೆಗಳ  ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಕಾರ್ಯಮದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು, ಬಿ.ಎಲ್.ಓ.ಗಳು,  ಕಾಲೇಜಿನ ಉಪನ್ಯಾಸಕರು ಹಾಗೂ ನಾಗರಿಕರು, ವಿದ್ಯಾರ್ಥಿಗಳು,ಉಪಸ್ಥಿತರಿದ್ದರು. ತಹಶೀಲ್ದಾರ ವಿ.ಪಿ.ಕೊಟ್ರಳ್ಳಿ ಸ್ವಾಗತಿಸಿದರು. ವಿದ್ಯಾರ್ಥಿನಿ  ವೇದಾ ಕಾಮತ್ ಪ್ರಾರ್ಥಿಸಿದರು. ಉಪನ್ಯಾಸಕಿ ರೇಖಾ ಮೊಗೇರ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಮ್.ಆರ್.ಮುಂಜಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News