ಅಕ್ರಮ ವಲಸಿಗರ ಹೇಳಿಕೆ: ಬೆಳಪುವಿನಲ್ಲಿ ಪ್ರತಿಭಟನೆ

Update: 2020-01-25 17:21 GMT

ಕಾಪು: ಪೌರತ್ವ ಕಾಯ್ದೆಯನ್ನು ಮುಂದಿಟ್ಟುಕೊಂಡು ಬೆಳಪು ಗ್ರಾಮವನ್ನು ಅಕ್ರಮ ವಲಸಿಗರ ತಾಣ ಎಂಬ ಅರ್ಥದಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ನೀಡಿರುವ ಹೇಳಿಕೆ ಗ್ರಾಮಕ್ಕೆ ಮಾಡಿರುವ ಅಪಮಾನವಾಗಿದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.

ಅವರು ಬೆಳಪು ಪೇಟೆಯಲ್ಲಿ ಬೆಳಪು ಗ್ರಾಮದ ಬಗ್ಗೆ ಅವಮಾನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿ ನಡೆದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.

ಅಭಿವೃದ್ಧಿಯಲ್ಲಿ ರಾಜ್ಯ ಮತ್ತು ರಾಷ್ಟ್ರಕ್ಕೇ ಮಾದರಿಯಾಗಿರುವ ಬೆಳಪು ಗ್ರಾಮವು ಶಾಂತಿ ಮತ್ತು ಸೌಹಾರ್ದತೆಗೆ ಹೆಸರುವಾಸಿ ಯಾದ ಗ್ರಾಮವಾಗಿದೆ. ಈವರೆಗೂ ಇಲ್ಲಿ ಜಾತಿ, ಮತ, ಧರ್ಮಗಳ ನಡುವೆ ಯಾವುದೇ ಸಂಘರ್ಷವೇ ನಡೆದಿಲ್ಲ. ಬೆಳಪು ಗ್ರಾಮದಲ್ಲಿ ಯಾವುದೇ ಹೊರ ರಾಷ್ಟ್ರಗಳಿಂದ ಬಂದ ಯಾವುದೇ ಅಕ್ರಮ ವಲಸಿಗರಿಲ್ಲ. ಬದಲಾಗಿ ಇಲ್ಲಿ ಬೆಳಪು ಗ್ರಾಮದ ಸುತ್ತಮುತ್ತಲಿನಲ್ಲಿ ವಸತಿ ರಹಿತರಾಗಿದ್ದ ನಾಗರಿಕರು ಇಲ್ಲಿ ವಾಸವಾಗಿದ್ದಾರೆ. ಇದನ್ನು ಸ್ವತಃ ಗ್ರಾಮದ ಬಗ್ಗೆ ಅನಗತ್ಯ ಹೇಳಿಕೆ ನೀಡಿರುವವರೇ ಬಂದು ಪರಿಶೀಲಿಸಬಹುದು ಎಂದರು.

ಬೆಳಪು ಗ್ರಾ.ಪಂ. ಸದಸ್ಯರಾದ ಕರುಣಾಕರ್ ಶೆಟ್ಟಿ, ಶರತ್ ಕುಮಾರ್, ಪೈಗಂ ಬಾನು, ನೂರ್‍ಜಹಾನ್, ಕಾಪು ತಾಲೂಕು ಜಮಾಅತೆ ಇಸ್ಲಾಮಿ ಹಿಂದ್‍ನ ಅಧ್ಯಕ್ಷ ಅನ್ವರ್ ಅಲಿ ಕಾಪು, ಪ್ರಮುಖರಾದ ಮುಷ್ತಾಕ್ ಅಹ್ಮದ್, ಮುಕ್ತಾರ್ ಸಾಹೇಬ್, ಸತ್ತಾರ್ ಸಾಹೇಬ್, ಆಜಮ್, ಸಲಾವುದ್ದೀನ್, ಫಾಹಿಮ್, ಜಹೀರ್ ಅಹಮದ್, ಸ್ವಾಲಿ ಬೆಳಪು ಸಹಿತ ನೂರಾರು ಮಂದಿ  ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News