ವಿಟ್ಲ: ಜ. 26ರಂದು ಎಸ್ಕೆಎಸ್ಸೆಸ್ಸೆಫ್ ವತಿಯಿಂದ ಮಾನವ ಸರಪಳಿ

Update: 2020-01-25 17:25 GMT

ಮಂಗಳೂರು : ಎಸ್ಕೆಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿ ವತಿಯಿಂದ ವರ್ಷಂಪ್ರತಿ ನಡೆಸಲ್ಪಡುವ ಐತಿಹಾಸಿಕ ಮಾನವ ಸರಪಳಿ ಕಾರ್ಯಕ್ರಮವು ಜ.26ರಂದು ವಿಟ್ಲ ಸಮೀಪದ ಒಕ್ಕೆತ್ತೂರಿನಲ್ಲಿ ನಡೆಯಲಿದೆ.

ಕೇಂದ್ರ ಸಮಿತಿಯ ನಿರ್ದೇಶನ ಪ್ರಕಾರ ಸುಮಾರು ಇನ್ನೂರು ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲದಲ್ಲಿ ನಡೆಯುವ ಈ  ಕಾರ್ಯಕ್ರಮ ದಲ್ಲಿ ಸಾವಿರಾರು ಮಂದಿ ಭಾಗವಹಿಸುವರು. 'ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ' ಎಂಬ ಧ್ಯೇಯ ವಾಕ್ಯದೊಂದಿಗೆ ಸುಮಾರು ಹನ್ನೆರಡು ವರ್ಷಗಳಿಂದ ಈ ಕಾರ್ಯಕ್ರಮವು ಸರ್ವಧರ್ಮಗಳ ಜನರನ್ನು ಸೇರಿಸಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ನಡೆಯುತ್ತಿದ್ದು, ದೇಶದ ಸಂವಿಧಾನ ಕಾಪಾಡಲು ಈ ಸಂದರ್ಭ  ಪ್ರತಿಜ್ಞೆ ಮಾಡಲಾಗುತ್ತಿದೆ.

ಪ್ರಸಕ್ತ ಸನ್ನಿವೇಶದಲ್ಲಿ ಅತ್ಯಗತ್ಯವಾದ ಕೋಮು ಸೌಹಾರ್ದ ಯುತ ಭಾರತಕ್ಕಾಗಿ ಯುವ ಜನಾಂಗವನ್ನು ಸಜ್ಜುಗೊಳಿಸಲು ಈ ಕಾರ್ಯಕ್ರಮವು ಮುನ್ನುಡಿಯಾಗಲಿದ್ಧು, ಈ ಕಾರ್ಯಕ್ರಮದಲ್ಲಿ ಹಲವಾರು ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು, ಜಿಲ್ಲಾ ಕೋಶಾಧಿಕಾರಿ ಸಯ್ಯಿದ್ ಅಮೀರ್ ತಂಙಳ್ ಕಿನ್ಯ ದುಆ ನೇತೃತ್ವ ನೀಡಲಿದ್ದಾರೆ. ಸಮ‌ಸ್ತ ಕೇಂದ್ರ ಮುಶಾವರ ಸದಸ್ಯ ಅಬ್ದುಲ್ ಖಾದರ್ ಖಾಸಿಮಿ ಬಂಬ್ರಾಣ ಉದ್ಘಾಟನೆ ಗೈಯ್ಯಲಿದ್ದಾರೆ. ಖ್ಯಾತ ಭಾಷಣಕಾರ ಮುಹಮ್ಮದ್ ಕುಟ್ಟಿ ನಿಝಾಮಿ ವಯನಾಡ್ ಮುಖ್ಯ ಭಾಷಣ ಮಾಡಲಿದ್ದಾರೆ. ಜಿಲ್ಲಾಧ್ಯಕ್ಷ ಖಾಸಿಂ ದಾರಿಮಿ ಪ್ರತಿಜ್ಞಾವಿಧಿ ಬೋಧಿಸುವರು.

ಅತಿಥಿಗಳಾಗಿ ಅಂತಾರಾಷ್ಟ್ರೀಯ ಭಾಷಣಕಾರ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ, ವಿಟ್ಲ ಶೋಕಮಾತ ಇಗರ್ಜಿ ಧರ್ಮ ಗುರುಗಳಾದ ಎರಿಕ್ ಕ್ರಾಸ್ತಾ, ಮಾಜಿ ಸಚಿವರಾದ ಯು.ಟಿ ಖಾದರ್, ರಮಾನಾಥ ರೈ ಭಾಗವಹಿಸಲಿದ್ದಾರೆ ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಯಮಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News