ಚೀನಾ ಗಂಭೀರ ಪರಿಸ್ಥಿತಿ ಎದುರಿಸುತ್ತಿದೆ: ಅಧ್ಯಕ್ಷ ಜಿನ್ ಪಿಂಗ್

Update: 2020-01-26 16:54 GMT

ಬೀಜಿಂಗ್,ಜ.26: ಕನಿಷ್ಠ 41ಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರುವ ಮಾರಣಾಂತಿಕ ಕೊರೊನಾ ವೈರಸ್‌ ಸೋಂಕು ಹರಡುವುದನ್ನು ತಡೆಯಲು ಚೀನಿ ಅಧಿಕಾರಿಗಳು ಹರಸಾಹಸ ನಡೆಸುತ್ತಿರುವಂತೆಯೇ ದೇಶವು ಅತ್ಯಂತ ಗಂಭೀರ ಪರಿಸ್ಥಿತಿಯನ್ನು ಎದುರಿಸುತ್ತಿರುವುದಾಗಿ ಚೀನಾ ಅಧ್ಯಕ್ಷ ಕ್ಸಿಜಿನ್ ಪಿಂಗ್ ರವಿವಾರ ದೇಶದ ಜನತೆಗೆ ಎಚ್ಚರಿಕೆ ನೀಡಿದ್ದಾರೆ.

ಕೊರೊನೊ ವೈರಸ್ ರೋಗವನ್ನು ನಿಯಂತ್ರಿಸಲು ಜಗತ್ತಿನ ಅತ್ಯಧಿಕ ಜನಸಂಖ್ಯೆಯ ದೇಶವಾದ ಚೀನಾವು ಪೇಚಾಡುತ್ತಿರುವಂತೆಯೇ, ಅಲ್ಲಿನ ಆಸ್ಪತ್ರೆಗೆ ಈ ಸೋಂಕು ರೋಗಕ್ಕೆ ತುತ್ತಾದ ರೋಗಿಗಳಿಂದ ತುಂಬಿ ತುಳುಕುತ್ತಿವೆ. ಈಗಾಗಲೇ ಚೀನಾದಲ್ಲಿ 1300ಕ್ಕೂ ಅಧಿಕ ಮಂದಿಗೆ ಸೋಂಕು ತಗಲಿರುವುದು ದೃಢಪಟ್ಟಿದೆ.

 ‘‘ ನಾವು ಸ್ಥಿರವಾದ ಆತ್ಮವಿಶ್ವಾಸ, ಜೊತೆಯಾಗಿ ಶ್ರಮಿಸುವಿಕೆ, ವೈಜ್ಞಾನಿಕ ಪ್ರತಿಬಂಧಕ ಕ್ರಮಗಳು ಹಾಗೂ ನಿಖರವಾದ ನೀತಿಗಳ ಮೂಲಕ ಖಂಡಿತವಾಗಿಯೂ ನಾವು ಜಯಗಳಿಸಲು ಶಕ್ತರಾಗಲಿದ್ದೇವೆ’’ ಎಂದು ಕ್ಸಿ ಜಿನ್‌ಪಿಂಗ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.

  ಕೊರೊನಾ ವೈರಸ್ ಹಾಳಿಯ ಕೇಂದ್ರ ಬಿಂದುವಾಗಿರುವ ವುಹಾನ್ ನಗರದಲ್ಲಿ 450 ಮಂದಿ ಮಿಲಿಟರಿ ವೈದ್ಯಕೀಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ವುಹಾನ್ ನಗರದಲ್ಲಿರುವ ಮತ್ಸಾಹಾರ ಹಾಗೂ ಜಾನುವಾರು ಮಾರುಕಟ್ಟೆಯು ಈ ರೋಗದ ಕೇಂದ್ರ ಸ್ಥಾನವೆಂದು ಗುರುತಿಸಲಾಗಿದೆ.

ಫ್ರಾನ್ಸ್‌ನಲ್ಲಿಯೂ ಕೊರೊನಾ

   ವೂಹಾನ್ ನಗರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ ಕೊರೊನಾ ವೈರಸ್ ಈಗ ಚೀನಾದ ವಿವಿಧೆಡೆ ಹರಡಿದೆ ಹಾಗೂ ಸುಮಾರು 12 ದೇಶಗಳಲ್ಲಿಯೂ ಕಾಣಿಸಿಕೊಂಡಿದೆ. ಫ್ರಾನ್ಸ್ ಕೂಡಾ ತನ್ನ ನೆಲದಲ್ಲಿ ಮೂರು ಕೊರೊನಾ ವೈರಸ್ ಪ್ರಕರಣಗಳನ್ನು ದೃಢಪಡಿಸಿದ್ದು, ಯುರೋಪ್‌ನಲ್ಲಿ ಈ ಸೋಂಕು ರೋಗ ಕಾಣಿಸಿಕೊಂಡ ಮೊದಲ ದೇಶ ಇದಾಗಿದೆ.

 ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಚೀನಾದ ಫಾರ್‌ಬಿಡನ್ ಸಿಟಿ, ಶಾಂಘಾನ ಡಿಸ್ನಿಲ್ಯಾಂಡ್ ಹಾಗೂ ಚೀನಾದ ಮಹಾಗೋಡೆ ಸೇರಿದಂತೆ ಹಲವಾರು ಪ್ರವಾಸಿ ಆಕರ್ಷಣೆಯ ತಾಣಗಳನ್ನು ಕೂಡಾ ಮುನ್ನೆಚ್ಚರಿಕೆಯ ಕ್ರಮವಾಗಿ ಮುಚ್ಚುಗಡೆಗೊಳಿಸಲಾಗಿದೆ.

ಚೀನಾದ ಚಂದ್ರಮಾನ ಹೊಸ ವರ್ಷಾಚರಣೆಯ ಮುನ್ನಾ ದಿನವಾದ ಶುಕ್ರವಾರ ರಜಾದಿನವಾಗಿದ್ದರೂ,ಚೀನಾದ ಹಲವು ನಗರಗಳಲ್ಲಿ ರೋಗ ಭೀತಿಯಿಂದಾಗಿ ಜನರು ಮನೆಯಿಂ ಹೊರಬರುವುದಕ್ಕೆ ಹಿಂಜರಿಯುತ್ತಿದ್ದಾರೆ. ಇದರಿಂದಾಗಿ ನೂರಾರು ಚಿತ್ರ ಮಂದಿರಗಳು ಜನರಿಲ್ಲದೆ ಭಣಗುಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News