ದಲಿತರನ್ನು ನೋಡುವ ರೀತಿ ಬದಲಾಗಬೇಕು: ತಿಪ್ಪೇರುದ್ರ ಸ್ವಾಮೀಜಿ

Update: 2020-01-26 18:14 GMT

ಬೆಳ್ತಂಗಡಿ, ಜ.26: ಹಿಂದೂ ಧರ್ಮದಲ್ಲಿ ಹುಟ್ಟಿದ ಪ್ರತಿಯೊಬ್ಬ ದೇಶದ ಪ್ರಜೆಗೂ ನಮ್ಮ ಸಂಸ್ಕೃತಿ ಬಗ್ಗೆ ಅಭಿಮಾನವಿದೆ. ಆದರೆ ಸಮಾಜದಲ್ಲಿ ಸಾಕು ಪ್ರಾಣಿಗಳಿಗಿಂತಲೂ ಕಡೆಯಾಗಿ ದಲಿತ ಸಮುದಾಯವನ್ನು ನೋಡಿಕೊಳ್ಳುವ ಕಾರ್ಯ ನಡೆಯುತ್ತಿದೆ. ಇದು ಬದಲಾಗದೆ ದಲಿತರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಿಲ್ಲ ಎಂದು ತುಮಕೂರು ಜಿಲ್ಲೆಯ ತುರ್ವೇಕೆರೆ ಬೀಕಲ್‌ಕೆರೆ ಅಲ್ಲಮಪ್ರಭು ಮಠದ ತಿಪ್ಪೇರುದ್ರ ಸ್ವಾಮೀಜಿ ವಿಷಾಧಿಸಿದರು.

ದಲಿತ ಹಕ್ಕುಗಳ ಸಮಿತಿ ಹಾಗೂ ಶ್ರಮ ಶಕ್ತಿ ಸ್ವ-ಸಹಾಯ ಸಂಘಗಳ ಒಕ್ಕೂಟ ಇದರ ನೇತೃತ್ವದಲ್ಲಿ ಸಂವಿಧಾನ ಹಾಗೂ ಪ್ರಜಾಪ್ರಭುತ್ವ ರಕ್ಷಣೆಗಾಗಿ ರವಿವಾರ ಲಾಲ ಅಂಬೇಡ್ಕರ್ ರಸ್ತೆಯ ಪುತ್ರಬೈಲು ಎಂಬಲ್ಲಿ ದಲಿತರೊಂದಿಗೆ ಸಹಪಂಕ್ತಿ ಭೋಜನ ಉದ್ಘಾಟಿಸಿ ಮಾತನಾಡಿದರು.

ಪ್ರಾಣಿಗಳನ್ನು ಪ್ರೀತಿಸಲು ಕಲಿಸುವ ಧರ್ಮ ಮನುಷ್ಯನನ್ನು ಪ್ರೀತಿಸಲು ಕಲಿಸಬೇಕಾಗಿದೆ. ದಲಿತರಿಗೆ ಸರಕಾರಗಳು ಹಲವಾರು ಸೌಲಭ್ಯಗಳನ್ನು ನೀಡುತ್ತಿದೆ. ಆದರೆ ಅವರು ಸ್ವಾಭಿಮಾನದಿಂದ ಬದುಕಲು ಅವಕಾಶ ಕಲ್ಪಿಸುವುದು ಅತಿ ಅಗತ್ಯವಾಗಿದೆ. ಅವರನ್ನೂ ಸಮಾನರಾಗಿ ಕಂಡು ಪ್ರೀತಿಸುವ ಕಾರ್ಯ ನಡೆಯಬೇಕು ಎಂದರು.

ಭಾರತೀಯ ಸಂಸ್ಕೃತಿಯಲ್ಲಿ ಒಂದು ಭಾಗವಾಗಿರುವ ಹಿಂದೂ ಧರ್ಮವನ್ನು ಮನಸಾರೆ ಒಪ್ಪಿಕೊಂಡಿದ್ದರೂ ಅಲ್ಲಿರುವ ನ್ಯೂನ್ಯತೆಗಳು, ಮೂಡನಂಬಿಕೆ, ಅಸಮಾನತೆಗಳಿಂದ ಸಮಾಜ ಒಡೆದಿದೆ. ಸಮಾನತೆಗಾಗಿ ಹೋರಾಟ ಈಗ ಅನಿವಾರ್ಯವಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾದ ನೀತಿಗಳು ಜಾರಿಯಾಗುತ್ತಿರುವ ಈ ಸಂದರ್ಭದಲ್ಲಿ ಇದನ್ನರಿತು ಜಾತಿ ತಾರತಮ್ಯ ವಿರುದ್ಧ ಮತ್ತು ಸಂವಿಧಾನ ರಕ್ಷಣೆಗಾಗಿ 71ನೇ ಗಣರಾಜ್ಯೋತ್ಸವ ಸಂದರ್ಭ ನಡೆದ ಸಹಪಂಕ್ತಿ ಭೋಜನ ಕಾರ್ಯಕ್ರಮ ದೇಶಕ್ಕೆ ಮಾದರಿಯಾಗಿದೆ ಎಂದರು.

ಮುಖ್ಯ ಅತಿಥಿ ತಹಶೀಲ್ದಾರ್ ಗಣಪತಿ ಶಾಸ್ತ್ರಿ ಮಾತನಾಡಿ, ಸಮಾಜದ ಮುಖ್ಯವಾಹಿನಿಗೆ ಬರುವ ಅವಕಾಶಗಳನ್ನು ಸರಕಾರ ಪ್ರತಿಯೊಬ್ಬರಿಗೂ ರೂಪಿಸಿದೆ. ನಾವು ಹಿಂದುಳಿದವರು ಎಂಬ ಭಾವನೆ ಬಿಟ್ಟು ಸಮಾಜದಲ್ಲಿ ಅವಕಾಶಗಳನ್ನು ಬಳಸಿಕೊಂಡು ಮುನ್ನೆಲೆಗೆ ಬರಬೇಕು. ಹಿಂದುಳಿದ ಸಮಾಜಕ್ಕೆ ಶಿಕ್ಷಣ ಕಲ್ಪಿಸುವ ಮೂಲಕ ದೌರ್ಜನ್ಯದಿಂದ ಹೊರಬರಬರಲು ಪ್ರಯತ್ನ ನಡೆಸಬೇಕು ಎಂದು ಹೇಳಿದರು.

ಪೂಂಜಾಲಕಟ್ಟೆ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಸುಜೀತ್ ಮಾತನಾಡಿ, ಸಂವಿಧಾನ ಅನುಷ್ಠಾನಕ್ಕೆ ಬಂದ ದಿನದಂದು ಆಯೋಜಿಸಿರುವ ಸಹಪಂಕ್ತಿ ಭೋಜನ ಅರ್ಥಪೂರ್ಣ. ಶೋಷಣೆ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮಗಳು ನಡೆಯಬೇಕಾದ ಅನಿವಾರ್ಯತೆಯಿದೆ ಎಂದು ಹೇಳಿದರು.

ಸಂಗಾತಿ ಎಕೆಜಿ ಬೀಡಿ ಕಾರ್ಮಿಕರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಹರಿದಾಸ್ ಎಸ್.ಎಂ. ಕಾರ್ಯಕ್ರಮಕ್ಕೆ ಶುಭಕೋರಿದರು. ದಲಿತ ಹಕ್ಕುಗಳ ಸಮಿತಿ ಅಧ್ಯಕ್ಷ ಶೇಖರ್ ಎಲ್. ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News