​ದ.ಕ. ಜಿಲ್ಲೆಯ ವಿವಿಧೆಡೆ ಸಂಭ್ರಮದ ಗಣರಾಜ್ಯೋತ್ಸವ

Update: 2020-01-26 18:23 GMT

ಕಂಕನಾಡಿ: ಪೀಟರ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನಲ್ಲಿ ಗಣರಾಜ್ಯೋತ್ಸವ
ಮಂಗಳೂರು, ಜ.26: ನಗರದ ಕಂಕನಾಡಿಯ ಪೀಟರ್ಸ್ ಕೋರ್ಟ್ ಅಪಾರ್ಟ್‌ಮೆಂಟ್‌ನಲ್ಲಿ 71ನೇ ಗಣರಾಜ್ಯೋತ್ಸವ ಸಮಾರಂಭವನ್ನು ಧ್ವಜಾರೋಹಣ ಮಾಡುವ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಸಲೀಂ ಧ್ವಜಾರೋಹಣ ನೆರವೇರಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮುಹಮ್ಮದ್ ಇಕ್ಬಾಲ್ ಮಾಸ್ಟರ್, ಸ್ವತಂತ್ರ ಭಾರತವು ಸಂವಿಧಾನವನ್ನು ಅನುಷ್ಠಾನಕ್ಕೆ ತಂದು ದೇಶದ ಆಡಳಿತ ಚೌಕಟ್ಟನ್ನು ರೂಪಿಸಿದೆ. ಈ ದಿನ ಐತಿಹಾಸಿಕವಾದುದು. ದೇಶವು ಪ್ರಪಂಚದಲ್ಲಿ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ಅದನ್ನು ಉಳಿಸುವ ಜವಾಬ್ದಾರಿಯು ನಮ್ಮೆಲ್ಲರ ಮೇಲಿದೆ ಎಂದರು.

ಅಪಾರ್ಟ್‌ಮೆಂಟ್ ಅಧ್ಯಕ್ಷ ಡಾ.ಝಲ್ಫಿಕರ್ ಅಹ್ಮದ್ ಮಾತನಾಡಿ, ಸ್ನೇಹ ಹಾಗೂ ಸೌಹಾರ್ದದ ವಾತಾವರಣ ನಿರ್ಮಿಸಬೇಕು. ಹಕ್ಕು ಮತ್ತು ಕರ್ತವ್ಯವನ್ನು ಪ್ರತಿಯೊಬ್ಬ ಪ್ರಜೆಯು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.

ಉಪಾಧ್ಯಕ್ಷರಾದ ಶಬ್ಬೀರ್ ಎಸ್. ಸಂವಿಧಾನದ ಪೀಠಿಕೆಯ ಪ್ರತಿಜ್ಞಾವಿಧಿ ಬೋಧಿಸಿದರು. ಕಾರ್ಯದರ್ಶಿ ಬಶೀರ್ ಕಾರ್ಯಕ್ರಮ ನಿರೂಪಿಸಿದರು. ಸಮಿತಿಯ ಸದಸ್ಯರಾದ ಜೋನ್, ಲ್ಯಾನ್ಸಿ ಪೀಟರ್, ಉರ್ಬಾನ್, ವಿನ್ಸೆಂಟ್ ಹಾಗೂ ಪೀಟರ್ಸ್ ಕೋರ್ಟ್‌ನ ನಿವಾಸಿಗಳು ಇದ್ದರು.

ಎನ್‌ಎಂಪಿಟಿಯಿಂದ ಗಣರಾಜ್ಯೋತ್ಸವ
ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ (ಎನ್‌ಎಂಪಿಟಿ) ನಿಂದ 71ನೇ ಗಣರಾಜ್ಯೋತ್ಸವವನ್ನು ಎನ್‌ಎಂಪಿಟಿ ಸ್ಟೇಡಿಯಂನಲ್ಲಿ ರವಿವಾರ ಸಂಭ್ರಮದಿಂದ ಆಚರಿಸಲಾಯಿತು.

ಪಣಂಬೂರಿನ ಸಿಐಎಸ್‌ಎಫ್ (ಕೇಂದ್ರ ಕೈಗಾರಿಕಾ ಭದ್ರತಾ ಪಡೆ), ಎನ್‌ಎಂಪಿಟಿ ಅಗ್ನಿಶಾಮಕ ದಳ, ಸ್ಕೌಟ್ಸ್ ಆ್ಯಂಡ್ ಗೈಡ್ಸ್‌ನಿಂದ ಗಣರಾಜ್ಯೋತ್ಸವ ಪ್ರಯುಕ್ತ ಪರೇಡ್ ನಡೆಸಲಾಯಿತು. ಎನ್‌ಎಂಪಿಟಿ ಚೇರ್‌ಮನ್ ಅಕ್ಕರಾಜು ವೆಂಕಟ ರಮಣ ಪರೇಡ್ ಗೌರವ ಸ್ವೀಕರಿಸಿದರು. ಪಣಂಬೂರು ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು.

ಫಲಾಹ್ ವಿದ್ಯಾ ಸಂಸ್ಥೆಯಲ್ಲಿ ಗಣರಾಜ್ಯೋತ್ಸವ
ತಲಪಾಡಿಯ ಫಲಾಹ್ ವಿದ್ಯಾಸಂಸ್ಥೆಯಲ್ಲಿ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು.
 ಸಂಸ್ಥೆಯ ಅಧ್ಯಕ್ಷ ಹಾಜಿ ಅರಬಿಕುಂಞಿ ಧ್ವಜಾರೋಹಣಗೈದರು. ಸಂಸ್ಥೆಯ ಕಾರ್ಯದರ್ಶಿ ಇಸ್ಮಾಯೀಲ್ ನಾಗತೋಟ ಮಾತನಾಡಿದರು. ವಿದ್ಯಾರ್ಥಿಗಳ ಸಾಮೂಹಿಕ ಕವಾಯತು ಕಾರ್ಯಕ್ರಮದಲ್ಲಿ ಆಕರ್ಷಣೆಯಾಗಿತ್ತು.

ಈ ಸಂದರ್ಭ ಕೋಶಾಧಿಕಾರಿ ಅಬ್ಬಾಸ್ ಮಜಲ್, ಮಾಜಿ ಅಧ್ಯಕ್ಷ ಹಾಜಿ ಯು.ಬಿ. ಮುಹಮ್ಮದ್, ಪ್ರಾಂಶುಪಾಲ ಅಬ್ದುಲ್ ಖಾದರ್ ಹುಸೈನ್, ಕನ್ನಡ ಮಾಧ್ಯಮ ಮುಖ್ಯೋಪಾಧ್ಯಾಯ ಮುಹಮ್ಮದ್ ರಫೀಕ್ ಕೆ., ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಆಯಿಶಾ ಸಬೀನ ಕೈಸಿರಾನ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ವಿದ್ಯಾ ಡಿಸೋಜ, ಹಿರಿಯ ಶಿಕ್ಷಕಿ ಐರಿನ್ ರೋಡ್ರಿಗಸ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News