ಶೌಚಗುಂಡಿ ಸ್ವಚ್ಛತೆ ವೇಳೆ 4 ವರ್ಷಗಳಲ್ಲಿ 282 ಸಾವು: ಕಾರ್ಮಿಕರ ಬಾಳಿಗೆ ಬೆಳಕು ತರದ 'ಸ್ವಚ್ಛ ಭಾರತ್'

Update: 2020-01-27 13:53 GMT

ಹೊಸದಿಲ್ಲಿ: ಶೌಚಗುಂಡಿಗಳನ್ನು ಸ್ವಚ್ಛಗೊಳಿಸುವ ವೇಳೆ ನಡೆಯುತ್ತಿರುವ ದುರಂತಗಳಲ್ಲಿ ಹಲವರು ಬಲಿಯಾಗುತ್ತಿರುವ ಕುರಿತಂತೆ ಬಾಂಬೆ ಹೈಕೋರ್ಟ್ ಇತ್ತೀಚೆಗೆ ಆತಂಕ ವ್ಯಕ್ತಪಡಿಸಿದ ಬೆನ್ನಲ್ಲೇ, ಮುಂಬೈಯಲ್ಲಿ ಹೌಸಿಂಗ್ ಸೊಸೈಟಿಯ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುತ್ತಿದ್ದ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಯಂತ್ರದ ಮೂಲಕ ಶೌಚಗುಂಡಿ ಶುಚಿಗೊಳಿಸುವ ಬದಲು ಮಾನವ ಶ್ರಮದ ಮೂಲಕ ಶುಚಿಗೊಳಿಸುವ ಕ್ರಮವನ್ನು ನಿಷೇಧಿಸುವ ಕಾನೂನು ಜಾರಿಯಲ್ಲಿದ್ದರೂ ದೇಶದಲ್ಲಿ  ಶೌಚಗುಂಡಿ ಅಥವಾ ಸೆಪ್ಟಿಕ್ ಟ್ಯಾಂಕ್ ಶುಚಿಗೊಳಿಸುವ ವೇಳೆ 2016 ಹಾಗೂ ನವೆಂಬರ್ 2019ರ ನಡುವೆ  282 ಕಾರ್ಮಿಕರು ಮೃತಪಟ್ಟಿದ್ದಾರೆಂದು  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ರಾಜ್ಯಸಭೆಯಲ್ಲಿ ನೀಡಿದ ಉತ್ತರದಲ್ಲಿ ತಿಳಿಸಿದೆ.

ಈ ಅವಧಿಯಲ್ಲಿ ಗರಿಷ್ಠ 40 ಸಾವುಗಳು ತಮಿಳುನಾಡಿನಲ್ಲಿ ಸಂಭವಿಸಿದ್ದರೆ, ಹಯಾರ್ಣದಲ್ಲಿ 31 ಹಾಗೂ ದಿಲ್ಲಿ ಮತ್ತು ಗುಜರಾತದಲ್ಲಿ ತಲಾ 30 ಮಂದಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಲ್ಲಿ 27 ಸಾವುಗಳು ಸಂಭವಿಸಿವೆ. 2016ರಲ್ಲಿ ದೇಶದ ವಿವಿಧೆಡೆ ಶೌಚಗುಂಡಿ ಸ್ವಚ್ಛಗೊಳಿಸುವ ವೇಳೆ 50 ಮಂದಿ ಕಾರ್ಮಿಕರು ಮೃತಪಟ್ಟಿದ್ದರೆ ಮುಂದಿನ ವರ್ಷಗಳಲ್ಲಿ ಈ ಸಂಖ್ಯೆ 83, 66 ಹಾಗೂ 83 ಆಗಿತ್ತು.

ವಿವಿಧ ರಾಜ್ಯಗಳಲ್ಲಿ ದಾಖಲಾಗಿರುವ ಎಫ್‍ಐಆರ್ ಆಧಾರದಲ್ಲಿ ಈ ಸಂಖ್ಯೆ ನೀಡಲಾಗಿರುವುದರಿಂದ ವಾಸ್ತವದಲ್ಲಿ ಇಂತಹ ಅವಘಡಗಳ ಸಂಖ್ಯೆ ಇನ್ನೂ ಹೆಚ್ಚಾಗಿರಬಹುದು ಎಂದು ಸಫಾಯಿ ಕರ್ಮಚಾರಿ ಆಂದೋಲನ್ ಹೇಳಿದೆ.

ಇನ್ನೊಂದು ಮಹತ್ವದ ವಿಚಾರವನ್ನು ಗಮನಿಸುವುದಾದರೆ 2003ರಲ್ಲಿ 8 ಲಕ್ಷದಷ್ಟಿದ್ದ ಶೌಚ ಸ್ವಚ್ಛತಾ ಕಾರ್ಮಿಕರ ಸಂಖ್ಯೆ ಹಲವು ಕ್ರಮಗಳ ಬಳಿಕ 13 ಸಾವಿರಕ್ಕೆ ಇಳಿದಿದೆ. ಆದರೆ ಸ್ವಚ್ಛ ಭಾರತ ಯೋಜನೆಯ ಹೊರತಾಗಿಯೂ 2018ರಲ್ಲಿ ಈ ಸಂಖ್ಯೆ 42,303ಕ್ಕೇರಿದೆ.

ಕೃಪೆ: theprint.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News