ವಿಪಕ್ಷ ಧರ್ಮಕ್ಕಾಗಿ ರಾಷ್ಟ್ರ ಧರ್ಮ ಮರೆಯದಿರಿ: ಕೇಂದ್ರ ಸಚಿವ ರಾಜನಾಥ್ ಸಿಂಗ್

Update: 2020-01-27 15:09 GMT

ಮಂಗಳೂರು, ಜ. 27: ಸಿಎಎ ಕಾಯ್ದೆಯ ಕುರಿತಂತೆ ಕಾಂಗ್ರೆಸ್ ಗೊಂದಲದ ವಾತಾವರಣವನ್ನು ನಿರ್ಮಿಸಿದ್ದು, ಯಾವುದೇ ವಿಪಕ್ಷಗಳು ತಮ್ಮ ಪಕ್ಷ ಧರ್ಮವನ್ನು ನಿಭಾಯಿಸುವುದಕ್ಕಾಗಿ ರಾಷ್ಟ್ರ ಧರ್ಮವನ್ನು ಮರೆಯಬಾರದು ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

ನಗರದ ಕೂಳೂರಿನ ಗೋಲ್ಡ್‌ಪಿಂಚ್ ಮೈದಾನದಲ್ಲಿ ಇಂದು ಕೇಂದ್ರ ಸರಕಾರದ ಸಿಎಎ ಪರ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಮಹಾತ್ಮ ಗಾಂಧಿಯವರೇ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರು ಹಾಗೂ ಕಾಂಗ್ರೆಸ್ ನಾಯಕರಿಗೆ, ಪಾಕಿಸ್ತಾನದ ಅಲ್ಪಸಂಖ್ಯಾತರು ದೌರ್ಜನ್ಯಕ್ಕೊಳಗಾಗಿ ಆಶ್ರಯ ಕೋರಿದಾಗ ಅವರಿಗೆ ಪೌರತ್ವ ನೀಡುವಂತೆ ಹೇಳಿದ್ದರು. ಅದನ್ನೇ ನಾವು ಮಾಡಿದ್ದೇವೆ. ಸ್ವಾತಂತ್ರ್ಯದ ಸಂದರ್ಭ ದೇಶ ವಿಭಜನೆಗೊಂಡಾಗ ಪೂರ್ವ ಪಾಕಿಸ್ತಾನದ ಹಿಂದೂಗಳು ಕಾರಣಾಂತರಗಳಿಂದ ಅಲ್ಲೇ ಉಳಿಯಬೇಕಾಯಿತು. ವಾಜಪೇಯಿಯವರು ಪ್ರಧಾನಿ ಆಗಿದ್ದ ವೇಳೆ ಅಡ್ವಾಣಿಯವರು ಗೃಹ ಸಚಿವರಾಗಿದ್ದ ಸಂದರ್ಭದಲ್ಲಿ ಡಾ. ಮನಮೋಹನ್ ಸಿಂಗ್ ಅವರು ಕೂಡಾ ರಾಜ್ಯ ಸಭೆಯಲ್ಲಿ ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಅಲ್ಪಸಂಖ್ಯಾತರ ಬಗ್ಗೆ ಸಂವೇದನಶೀಲತೆಯಿಂದ ವರ್ತಿಸುವ ಅಗತ್ಯವಿದೆ ಎಂದು ಹೇಳಿದ್ದರು. ನಿಮ್ಮದೇ ಪಕ್ಷದ ನಾಯಕರು ಹಾಗೂ ಮಹಾತ್ಮ ಗಾಂಧಿಯವರು ಹೇಳಿದ್ದನ್ನೇ ಪ್ರಧಾನಿ ನರೇಂದ್ರ ಮೋದಿ ಸರಕಾರ ಮಾಡಿದ್ದು, ನಮ್ಮ ಮೇಲೆ ಬೆರಳು ತೋರಿಸುವುದೇಕೆ ಎಂದವರು ವಿಪಕ್ಷವನ್ನು ಪ್ರಶ್ನಿಸಿದರು.

ಸಿಎಎ ನೆರೆಯ ಮುಸ್ಲಿಂ ಧರ್ಮಾಧಾರಿತ ರಾಷ್ಟ್ರಗಳಲ್ಲಿ ಸಂಕಷ್ಟವನ್ನು ಅನುಭವಿಸಿರುವ ಅಲ್ಪಸಂಖ್ಯಾತರಿಗೆ ಧಾರ್ಮಿಕ ಭಾವನೆಯ ಸುರಕ್ಷೆಯನ್ನು ನೀಡುವುದಾಗಿದೆಯೇ ಹೊರತು ಯಾವುದೇ ಧರ್ಮದ ಬಗ್ಗೆ ದ್ವೇಷ ಸಾಧಿಸುವುದಲ್ಲ. ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು ಪೀಡನೆ ಅನುಭವಿಸಿ ಭಾರತಕ್ಕೆ ಬಂದಾಗ ಅವರಿಗೆ ಗೌರವದ ಬದುಕನ್ನು ನೀಡಬೇಕೆಂಬ ನಿಟ್ಟಿನಲ್ಲಿ ಈ ಕಾನೂನು ಮಾಡಲಾಗಿದೆ. ಇದರಿಂದ ಯಾರಿಗೂ ತೊಂದರೆ ಆಗುವುದಿಲ್ಲ ಎಂದವರು ಹೇಳಿದರು.

ಪಾಕಿಸ್ತಾನ, ಬಾಂಗ್ಲಾ ಹಾಗೂ ಅಫ್ಘಾನಿಸ್ತಾನದ ಮುಸ್ಲಿಮರಿಗೆ ಯಾಕೆ ಪೌರತ್ವ ನೀಡುವುದಿಲ್ಲ ಎಂದು ಕೇಳಲಾಗುತ್ತಿದೆ. ಅದಕ್ಕೆ ಕಾರಣ ಅದು ಜಾತ್ಯತೀತ ರಾಷ್ಟ್ರಗಳಲ್ಲ. ಅವುಗಳು ಮುಸ್ಲಿಂ ಧರ್ಮವನ್ನು ಪಾಲಿಸುವ ರಾಷ್ಟ್ರಗಳು. ಹಾಗಾಗಿ ಅಲ್ಲಿ ಮುಸ್ಲಿಮರಿಗೆ ದೌರ್ಜನ್ಯ ಆಗಲು ಸಾಧ್ಯವಿಲ್ಲ. ಹಾಗಿದ್ದರೂ ಅಲ್ಲಿಂದ ವೀಸಾ ಹೊಂದಿರುವ ಮುಸ್ಲಿಮರಿಗೂ ಪೌರತ್ವ ಸಿಗಲಿದೆ. ಕಳೆದ ಆರು ವರ್ಷಗಳಲ್ಲಿ 600 ಮಂದಿ ಮುಸ್ಲಿಮರಿಗೆ ಪೌರತ್ವ ನೀಡಲಾಗಿದೆ. ನಾನು ಗೃಹ ಸಚಿವನಾಗಿದ್ದಾಗ ಅದ್ನಾನ್ ಸಾಮಿಗೆ ಪೌರತ್ವ ನೀಡಿರುವುದು ಎಂದು ರಾಜನಾಥ್ ಸಿಂಗ್ ಉಲ್ಲೇಖಿಸಿದರು.

ಉತ್ತಮ ಕೆಲಸ ಮಾಡುವುದನ್ನು ಯಾರಿಂದಲೂ ತಡೆಯಲಾಗದು. ನಮಗೆ ಜಯ ಸಿಗಲಿದೆ. ವಿಶ್ವದ ಯಾವುದೇ ತಾಕತ್ತಿನಿಂದಲೂ ಅದನ್ನು ತಡೆಯಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ಹಿಂದೂ - ಮುಸಲ್ಮಾನರ ನಡುವೆ ಬೇಧಭಾವ ಸೃಷ್ಟಿಸುವ ಕೆಲಸವನ್ನು ಕೆಲ ಶಕ್ತಿಗಳಿಂದ ನಡೆಸುತ್ತಿವೆ. ಇದರಲ್ಲಿ ವಿದೇಶಿಯರ ಕೈವಾಡವೂ ಇರಬಹುದು. ಸ್ವಾತಂತ್ರಕ್ಕಾಗಿ ನಾವು ಒಗ್ಗಟ್ಟಾಗಿ ಹೋರಾಡಿದ್ದೇವೆ. ಭಾರತ ಜಾತ್ಯತೀತ, ಧರ್ಮ ನಿರಾಪೇಕ್ಷ ರಾಷ್ಟ್ರ. ಇದನ್ನು ಸ್ವಾಮಿ ವಿವೇಕಾನಂದರು 1893ರಲ್ಲಿ ಚಿಕಾಗೋ ವಿಶ್ವ ಸಮ್ಮೇಳನದಲ್ಲಿ ಸ್ಪಷ್ಟಪಡಿಸಿದ್ದಾರೆ. ನಮ್ಮ ಯಾವುದೇ ಮುಸಲ್ಮಾನರಿಗೆ ಈ ಕಾನೂನಿನಿಂದ ತೊಂದರೆ ಆಗುತ್ತದೆ ಎಂದಾದರೆ ಬಿಜೆಪಿ ಪಕ್ಷ ಅವರ ಜತೆಗೆ ನಿಲ್ಲಲಿದೆ ಎಂದು ರಾಜನಾಥ್ ಸಿಂಗ್ ಹೇಳಿದರು.

‘‘ಇಲ್ಲಿ ಸೇರಿರುವವರು ಮುಸಲ್ಮಾನರು ಸೇರಿದಂತೆ ಮತ ಧರ್ಮಗಳ ಬೇಧವಿಲ್ಲದೆ, ಈ ಕಾನೂನಿನ ಬಗ್ಗೆ ಜನಸಾಮಾನ್ಯರಿಗೆ ಅರ್ಥ ಮಾಡಿಸುವ ಕೆಲಸ ಮಾಡಬೇಕು’’ ಎಂದು ಕರೆ ನೀಡಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಪ್ರಧಾನಿ ನರೇಂದ್ರ ಮೋದಿಯವರು ಹೇಳಿದಂತೆ ಎನ್‌ಆರ್‌ಸಿ ಬಗ್ಗೆ ಯಾವುದೇ ಚರ್ಚೆ ಆಗಿಲ್ಲ. ಹಾಗಿದ್ದರೂ ಮುಸ್ಲಿಂ ಸಮುದಾಯದಲ್ಲಿ ಭಯ ಹುಟ್ಟಿಸುವ ಕೆಲಸ ಮಾಲಾಗುತ್ತಿದೆ ಎಂದವರು ಹೇಳಿದರು.

ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ನಳಿನ್ ಕುಮಾರ್ ಕಟೀಲು, ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

'ಹೇಳಿದ್ದನ್ನು ಮಾಡುವ ಪಕ್ಷ ಬಿಜೆಪಿ'

ಬಿಜೆಪಿ ಚುನಾವಣೆಗೆ ಪೂರ್ವದಲ್ಲಿ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಈಡೇರಿಸಿದೆ. ಹೇಳಿದ್ದನ್ನು ಮಾಡುವ ಪಕ್ಷವಿದ್ದರೆ ಅದು ಬಿಜೆಪಿ. ಪಕ್ಷಕ್ಕೆ ಸಂಪೂರ್ಣ ಬಹುಮತ ದೊರಕಿದ್ದಲ್ಲಿ ಕಾಶ್ಮೀರದಲ್ಲಿ 370ನೆ ವಿಧಿ ರದ್ಧು ಮಾಡುವುದಾಗಿ ಹೇಳಿತ್ತು. ಆ ಕಾರ್ಯ ಪೂರೈಸಿದೆ. ಇದೀಗ ಸುಪ್ರೀಂ ಕೋರ್ಟ್‌ನ ಮೂಲಕ ರಾಮ ಮಂದಿರ ನಿರ್ಮಾಣದ ಬಿಜೆಪಿ ಕನಸು ನನಸಾಗಿದೆ. ಒಂದೂವರೆ ವರ್ಷದಲ್ಲಿ ಅಯೋಧ್ಯೆಯಲ್ಲಿ ಬೃಹತ್ ರಾಮಮಂದಿರವನ್ನು ನಿರ್ಮಾಣ ಮಾಡಲಿದ್ದೇವೆ. ಯಾವುದೇ ಶಕ್ತಿ ಅದನ್ನು ತಡೆಯಲಾಗದು ಎಂದು ಹೇಳಿದ ಕೇಂದ್ರ ಸಚಿವ ರಾಜನಾಥ್ ಸಿಂಗ್, ಧರ್ಮ ಆದಾರದಲ್ಲಿ ದೇಶವನ್ನು ವಿಭಜಿಸಿದ್ದು ಕಾಂಗ್ರೆಸ್ ಎಂದು ಹೇಳಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News