ಅಮು ವಿದ್ಯಾರ್ಥಿಗಳಿಂದ ಹೆದ್ದಾರಿಯಲ್ಲಿ ತಡೆ: ಬಂಧಿತ ಸಹವಿದ್ಯಾರ್ಥಿಯ ಬಿಡುಗಡೆಗೆ ಆಗ್ರಹ

Update: 2020-01-27 14:20 GMT

ಅಲಿಗಡ (ಉ.ಪ್ರ),ಜ.27: ಅಲಿಗಢ ಮುಸ್ಲಿಮ್ ವಿವಿ (ಅಮು)ಯ ನೂರಾರು ವಿದ್ಯಾರ್ಥಿಗಳು ರವಿವಾರ ಅಲಿಗಢ-ಮೊರಾದಾಬಾದ್ ಹೆದ್ದಾರಿಯಲ್ಲಿ ವಾಹನಗಳ ಸಂಚಾರಕ್ಕೆ ತಡೆಯೊಡ್ಡಿ ಗಣರಾಜ್ಯೋತ್ಸವ ದ ಭಾಷಣದ ಸಂದರ್ಭ ಕುಲಪತಿಗಳನ್ನು ತಳ್ಳಾಡಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ಸಹವಿದ್ಯಾರ್ಥಿಯ ಬಿಡುಗಡೆಗೆ ಆಗ್ರಹಿಸಿದರು.

 ರವಿವಾರ ಸಂಜೆ ಆರಂಭಗೊಂಡಿದ್ದ ಹೆದ್ದಾರಿ ತಡೆ ಸೋಮವಾರ ನಸುಕಿನ ಎರಡು ಗಂಟೆಯವರೆಗೂ ಮುಂದುವರಿದಿತ್ತು. ಪರಿಸ್ಥಿತಿಯ ಹಿನ್ನೆಲೆಯಲ್ಲಿ ಸೋಮವಾರ ಅಮು ಇಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯಲಿದ್ದ ಪರೀಕ್ಷೆಯನ್ನು ವಿವಿ ರದ್ದುಗೊಳಿಸಿತ್ತು.

ಕುಲಪತಿ ತಾರಿಕ್ ಮನ್ಸೂರ್ ಅವರು ತನ್ನ ಭಾಷಣದಲ್ಲಿ ಕ್ಯಾಂಪಸ್‌ ನಲ್ಲಿಯ ಇತ್ತೀಚಿನ ಬೆಳವಣಿಗೆಗಳನ್ನು ದುರದೃಷ್ಟಕರ ಎಂದು ಬಣ್ಣಿಸಿದ್ದರಲ್ಲದೆ ,ಕಾನೂನಿನ ವ್ಯಾಪ್ತಿಯಲ್ಲಿ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶವಿದೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ವಿದ್ಯಾರ್ಥಿಗಳ ಗುಂಪೊಂದು ಅವರನ್ನು ಎಳೆದಾಡಿತ್ತು. ಘಟನೆಗೆ ಸಂಬಂಧಿಸಿದಂತೆ ನಾಲ್ವರನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು. ಮಧ್ಯಾಹ್ನ ಪ್ರತಿಭಟನಾಕಾರರ ಗುಂಪೊಂದು ಅಮು ಶಿಸ್ತುಪಾಲಕರ ಕಚೇರಿಯ ದ್ವಾರದ ಬಳಿ ವಿದ್ಯಾರ್ಥಿಗಳ ಬಿಡುಗಡೆಗೆ ಆಗ್ರಹಿಸಿತ್ತು. ನಂತರ ಪೊಲೀಸರು ಮೂವರು ವಿದ್ಯಾರ್ಥಿಗಳನ್ನು ಬಿಡುಗಡೆಗೊಳಿಸಿ,ಎ.ಮುಜ್ತಬಾ ಫರಾಝ್ ಎಂಬಾತನನ್ನು ಜೈಲಿಗೆ ಕಳುಹಿಸಿದ್ದರು.

ಸೋಮವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಮು ಶಿಸ್ತುಪಾಲನಾ ಅಧಿಕಾರಿ ಪ್ರೊ.ಅಫಿಫುಲ್ಲಾ ಖಾನ್ ಅವರು,ಶಿಕ್ಷಕರು ಮತ್ತು ವಿವಿಯ ಉನ್ನತ ಅಧಿಕಾರಿಗಳ ಗುಂಪೊಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿದೆ. ಫರಾಝ್ ಶೀಘ್ರವೇ ಜಾಮೀನು ಬಿಡುಗಡೆಯಾಗಲಿದ್ದಾರೆ ಎಂದು ಆಶಿಸಿದ್ದೇವೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News