ಮರ್ಣೆ ಗ್ರಾಪಂ ಎಸ್‌ಸಿ-ಎಸ್‌ಟಿ ನಿಧಿಯಲ್ಲಿ ಅವ್ಯವಹಾರ ವಿರೋಧಿಸಿ ಧರಣಿ

Update: 2020-01-27 15:06 GMT

ಉಡುಪಿ, ಜ.27: ಮರ್ಣೆ ಗ್ರಾಪಂನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮೀಸಲಿರಿಸಿರುವ ಶೇ.25ರ ನಿಧಿಯ ದುರ್ಬಳಕೆ ಖಂಡಿಸಿ ಹಾಗೂ ಈ ಅವ್ಯವಹಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸುವಂತೆ ಆಗ್ರಹಿಸಿ ಸಮತಾ ಸೈನಿಕ ದಳ ಉಡುಪಿ ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ಸೋಮವಾರ ಮರ್ಣೆ ಗ್ರಾಪಂ ಕಚೇರಿ ಎದುರು ಧರಣಿ ನಡೆಸಲಾಯಿತು.

ಮರ್ಣೆ ಗ್ರಾಪಂನಲ್ಲಿ 2015-16ರಿಂದ 2019-20ನೆ ಸಾಲಿನ ಶೇ.25ರ ನಿಧಿಯ ಬಹುತೇಕ ಅನುದಾನ ದುರ್ಬಳಕೆಯಾಗಿದ್ದು, ಕೂಡಲೇ ನಿಷ್ಪಕ್ಷಪಾತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರಗಿಸಬೇಕು ಎಂದು ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ವಿಶ್ವನಾಥ ಪೇತ್ರಿ ಆಗ್ರಹಿಸಿದರು.

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮಕ್ಕಳು ಉನ್ನತ ಶಿಕ್ಷಣಕ್ಕಾಗಿ ಕಳೆದ ಎರಡು ವರ್ಷಗಳಿಂದಲೂ ಸಲ್ಲಿಸುತ್ತಿರುವ ಅರ್ಜಿಯನ್ನು ಕೂಡಲೇ ವಿಲೇವಾರಿ ಮಾಡಿ ಪ್ರತಿ ವಿದ್ಯಾರ್ಥಿಗಳಿಗೆ ಕನಿಷ್ಠ 25ಸಾವಿರ ರೂ. ವಿದ್ಯಾರ್ಥಿ ವೇತನ ಮಂಜೂರು ಮಾಡಬೇಕು. ಪರಿಶಿಷ್ಠ ಜಾತಿಯವರು ಇರುವ ಹೆರ್ಮುಂಡೆ ಹಾಗೂ ಕುಡ್ಜೆ ವಾರ್ಡ್‌ಗಳ ಪ್ರತಿ ಮನೆಗಳಿಗೂ ಉಚಿತ ನಳ್ಳಿ ನೀರಿನ ಸಂರ್ಕವನ್ನು ಕಲ್ಪಿಸಬೇಕು ಎಂದರು.

ಕೈಕಂಬದಿಂದ ಮಾರ್ಲಿವರೆಗೆ ದಾರಿದೀಪಗಳನ್ನು ಕೂಡಲೇ ಆಳವಡಿಸಬೇಕು ಮತ್ತು ಇಲ್ಲಿನ ಒಂದು ಕಿ.ಮೀ. ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಬೇಕು. ಇಲ್ಲಿರುವ ಸರಕಾರಿ ಭೂಮಿಯಲ್ಲಿ ಕನಿಷ್ಠ ಒಂದು ಎಕರೆ ಭೂಮಿಯನ್ನು ಸ್ಮಶಾನಕ್ಕಾಗಿ ಮೀಸಲಿರಿಸಿ, ಶವಸಂಸ್ಕಾರ ಘಟಕವನ್ನು ನಿರ್ಮಿಸಬೇಕು ಎಂದು ಅವರು ಒತ್ತಾಯಿಸಿದರು.

ಬಳಿಕ ಈ ಕುರಿತ ಮನವಿಯನ್ನು ಪಿಡಿಓ ಅವರಿಗೆ ಸಲ್ಲಿಸಲಾಯಿತು. ಧರಣಿ ಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸುಧಾಕರ ಸೂರ್ಗೋಲಿ, ಕೋಶಾಧಿಕಾರಿ ಶ್ರೀನಿವಾಸ ನಡೂರು, ಕಾರ್ಕಳ ತಾಲೂಕು ಅಧ್ಯಕ್ಷ ಗಜೇಂದ್ರ ಕಾರ್ಕಳ, ಹೆರ್ಮುಂಡೆ ಗ್ರಾಮ ಶಾಖೆ ಅಧ್ಯಕ್ಷ ಶೀನ ಕೈಕಂಬ, ಪ್ರಧಾನ ಕಾರ್ಯ ದರ್ಶಿ ಶೇಖರ್ ಎಂ., ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಎಂ., ಪ್ರಧಾನ ಕಾರ್ಯದರ್ಶಿ ಜಯಂತಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News