ಜನಪ್ರತಿನಿಧಿಗಳಿಗೆ ಸಂವಿಧಾನದ ಬಗ್ಗೆ ತಿಳುವಳಿಕೆ ಅಗತ್ಯ: ಜಯಪ್ರಕಾಶ್ ಹೆಗ್ಡೆ

Update: 2020-01-27 15:07 GMT

ಉಡುಪಿ, ಜ.27: ಜನಪ್ರತಿನಿಧಿಗಳು ನಮ್ಮ ದೇಶದ ಸಂವಿಧಾನದ ಕುರಿತು ಸರಿಯಾದ ತಿಳಿವಳಿಕೆಯನ್ನು ಹೊಂದಿರಬೇಕು. ಆಗ ಮಾತ್ರ ಸದನದಲ್ಲಿ ತನ್ನ ಕ್ಷೇತ್ರದ ಸಮಸ್ಯೆಗಳ ಕುರಿತು ಚರ್ಚಿಸಲು ಸಾಧ್ಯವಾಗುತ್ತದೆ. ಸಂವಿಧಾನದ ಬಗ್ಗೆ ತಿಳಿವಳಿಕೆಗಿಂತ ಸದನಕ್ಕೆ ಹಾಜರಾಗದ ಮತ್ತು ಸಮಸ್ಯೆಗೆ ಸ್ಪಂದಿಸದ ಸಾಕಷ್ಟು ಜನಪ್ರತಿನಿಧಿಗಳು ನಮ್ಮಲ್ಲಿದ್ದಾರೆ ಎಂದು ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.

ಉಡುಪಿ ಎಂಜಿಎಂ ಕಾಲೇಜಿನ ರಾಜಕೀಯ ಶಾಸ್ತ್ರ ಹಾಗೂ ಆರ್ಟ್ಸ್ ಕ್ಲಬ್ ವತಿಯಿಂದ ಕಾಲೇಜಿನಲ್ಲಿ ಶನಿವಾರ ರಾಷ್ಟ್ರೀಯ ಮತದಾರರ ದಿನ ಹಾಗೂ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಆಯೋಜಿಸಲಾದ ‘ಪ್ರಜಾ ಪ್ರಭುತ್ವ’... ಪ್ರಜೆಗಳೇ ಪ್ರಭುಗಳು? ಎಂಬ ವಿಷಯದ ಕುರಿತ ಸಂವಾದ ಕಾರ್ಯಕ್ರವುದಲ್ಲಿ ಅವರು ಮಾತನಾಡುತಿದ್ದರು.

ಗ್ರಾಪಂ, ತಾಪಂ, ಜಿಪಂ, ವಿಧಾನಸಭೆ, ಸಂಸತ್ತಿಗೆ ಜನರಿಂದ ಆಯ್ಕೆಯಾದ ಎಲ್ಲ ಜನಪ್ರತಿನಿಧಿಗಳು ಪ್ರಬುದ್ಧತೆಯಿಂದ ತಮ್ಮ ಕ್ಷೇತ್ರದ ಸಮಸ್ಯೆ, ಅಭಿವೃದ್ಧಿ ಬಗ್ಗೆ ಚರ್ಚಿಸಬೇಕು. ಆದರೆ ಇಂದು ಸದನದಲ್ಲಿ ಚರ್ಚೆಗಳ ಬದಲು ಪರಸ್ಪರ ಟೀಕೆಗಳೇ ಹೆಚ್ಚಾಗುತ್ತಿವೆ. ಈ ನಿಟ್ಟಿನಲ್ಲಿ ಮತದಾರರು ತಾವು ಆರಿಸಿರುವ ಜನಪ್ರತಿನಿಧಿಗಳನ್ನು ಪ್ರಶ್ನಿಸುವ ಮನೋಭಾವ ಬೆಳೆಸಿ ಕೊಳ್ಳಬೇಕು ಎಂದರು.

ಅಭಿವೃದ್ಧಿಯೊಂದಿಗೆ ಉತ್ತಮ ಆಡಳಿತ ನಡೆಸುವ ಬಗ್ಗೆ ಜನಪ್ರತಿನಿಧಿಗಳಿ ಗಿಂತ ಮತದಾರರಿಗೆ ಹೆಚ್ಚಿನ ಜವಾಬ್ದಾರಿ ಇರಬೇಕು. ಜನಪ್ರತಿನಿಧಿಗಳಿಗೆ ಮತ ದಾರರ ಮೇಲೆ ಗೌರವ ಮತ್ತು ಭಯ ಎರಡೂ ಇರಬೇಕು. ಜನರು ಕುರುಡು ಮತದಾರರಾಗಬಾರದು. ಕ್ಷೇತ್ರದ ಅಭಿವೃದ್ಧಿ, ಜನಪ್ರತಿನಿಧಿಗಳ ಕೆಲಸಗಳ ಬಗ್ಗೆ ಗಮನ ಹರಿಸಬೇಕು ಎಂದು ಅವರು ತಿಳಿಸಿದರು.

ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ.ವಿಜಯ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಮಾಲತಿ ದೇವಿ, ವಿದ್ಯಾರ್ಥಿ ನಾಯಕ ನವೀನ್, ರಾಜ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ಪ್ರೊ.ಕೊಕ್ಕರ್ಣೆ ಸುರೇಂದ್ರ ನಾಥ್ ಶೆಟ್ಟಿ, ಎಂಜಿಎಂ ಕಾಲೇಜು ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ವಿದ್ಯಾನಾಥ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಶ್ರೇಯಸ್ ಕೊಟ್ಯಾನ್ ಕಾರ್ಯಕ್ರಮ ನಿರೂ ಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News