ಸರಕಾರದ ಸಂವಿಧಾನ ವಿರೋಧಿ ನೀತಿಗಳ ವಿರುದ್ಧ ಹೋರಾಡುವುದು ನಮ್ಮ ಹಕ್ಕು: ಮಂಜುನಾಥ್

Update: 2020-01-27 16:12 GMT

ಉಡುಪಿ, ಜ.27: ಅಂಬೇಡ್ಕರ್ ರಚಿಸಿದ ಈ ದೇಶದ ಸಂವಿಧಾನಕ್ಕಿಂತ ಮೇಲೆ ಯಾರು ಇಲ್ಲ. ಆದುದರಿಂದ ಸರಕಾರಗಳು ಸಂವಿಧಾನದ ಆಶಯಕ್ಕೆ ತಕ್ಕಂತೆ ಆಡಳಿತ ನಡೆಸಬೇಕು. ಸರಕಾರಗಳು ಸಂವಿಧಾನ ವಿರೋಧಿ ನೀತಿಗಳನ್ನು ಜಾರಿಗೆ ತಂದರೆ, ಸಂವಿಧಾನದ ಚೌಕಟ್ಟಿನಲ್ಲಿ ಪ್ರತಿಭಟನೆ ನಡೆಸುವ ಹಕ್ಕನ್ನು ಇದೇ ಸಂವಿಧಾನ ನೀಡಿದೆ ಎಂದು ಉಡುಪಿ ನ್ಯಾಯವಾದಿ ಮಂಜುನಾಥ್ ಹೇಳಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಮತ್ತು ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಉಡುಪಿ ಇವುಗಳ ಸಹಯೋಗದಲ್ಲಿ ಸೋಮವಾರ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾದ ಡಾ.ಬಿ.ಆರ್. ಅಂಬೇಡ್ಕರ್ ಓದು ಕಾರ್ಯಕ್ರಮ ದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು.

ಜಾತಿ ವ್ಯವಸ್ಥೆ ಹಾಗೂ ಮನುಸ್ಮತಿಯ ನೀತಿ ನಿಯಮಗಳಿಗೆ ವಿರುದ್ಧವಾಗಿ ಸಮಾಜತೆ, ಸ್ವಾತಂತ್ರ, ಭಾತೃತ್ವದ ಆಧಾರದಲ್ಲಿ ಯಾವುದೇ ಕ್ರಾಂತಿ ಇಲ್ಲದೆ ಏಕಾಂಕಿಯಾಗಿ ಅಂಬೇಡ್ಕರ್ ಅವರು ಈ ದೇಶದ ಸಂವಿಧಾನವನ್ನು ರಚಿಸಿ ದರು. ಈ ಮೂಲಕ ದೇಶದಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯವಾಗಿದೆ. ಈ ಸಂವಿಧಾನವನ್ನು ರಕ್ಷಣೆ ಮಾಡುವ ಜವಾಬ್ದಾರಿ ಯುವ ಮುದಾಯದ ಮೇಲೆ ಇದೆ ಎಂದರು.

ಹಲವು ದಶಕಗಳ ಹಿಂದೆ ಮತದಾನದ ಹಕ್ಕು ಕೇವಲ ಸರಕಾರಕ್ಕೆ ತೆರಿಗೆ ಪಾವತಿಸುವವರಿಗೆ, ಜಮೀನುದಾರರಿಗೆ ಸೇರಿದಂತೆ ಬೆರಳೆಣಿಕೆ ಜನರಿಗೆ ಮಾತ್ರ ನೀಡಲಾಗುತ್ತಿತ್ತು. ಆದರೆ ಅಂಬೇಡ್ಕರ್ ಸಂವಿಧಾನದ ಮೂಲಕ ದೇಶದ ಪ್ರತಿಯೊಬ್ಬರಿಗೆ ಮತದಾನದ ಹಕ್ಕು ಕಲ್ಪಿಸಿ, ವಯಸ್ಕರಿಗೆ ಮತದಾನ ಮಾಡಲು ಅವಕಾ ಮಾಡಿಕೊಟ್ಟರು ಎಂದು ಹೇಳಿದರು.

ಅಂಬೇಡ್ಕರ್ ಭೌಗೋಳಿಕ ಸ್ವಾತಂತ್ರಕ್ಕಿಂತ ಭಾರತೀಯರ ಸ್ವಾತಂತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದರು. ಮಹಿಳೆಯರು ಹಾಗೂ ಅಸ್ಪಶ್ಯರ ಗೌರವಕ್ಕೆ ಧಕ್ಕೆ ತರುವ ಪದ್ಧತಿ ನಿಷೇಧ ಮಾಡಿ ದೇಶದ ಪ್ರತಿಯೊಬ್ಬರಿಗೂ ನಾಗರಿಕ ಹಕ್ಕು ಗಳನ್ನು ನೀಡಿದರು ಎಂದು ಅವರು ತಿಳಿಸಿದರು.

ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ ಎಸ್. ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಅಂಬೇಡ್ಕರ್ ಕುರಿತ ಪ್ರಬಂಧ ಸ್ಪರ್ಧೆ ಹಾಗೂ ಭಾಷಣ ಸ್ಪರ್ಧೆಯ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಮುಖ್ಯ ಅತಿಥಿಗಳಾಗಿ ಉಡುಪಿ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್, ಉಪನ್ಯಾಸಕ ಗಂಗಾಧರ್ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ಶಂಕರ್‌ದಾಸ್ ಚೇಂಡ್ಕಳ ಅಂಬೇಡ್ಕರ್ ಕುರಿತ ಗೀತೆಗಳ ಗಾಯನ ಮಾಡಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News