ಫೆ.1ಕ್ಕೆ ಸರ್ವಕ್ಷೇಮ ಆಸ್ಪತ್ರೆ, ಸಂಶೋಧನಾ ಪ್ರತಿಷ್ಠಾನ ಲೋಕಾರ್ಪಣೆ

Update: 2020-01-27 16:27 GMT

ಉಡುಪಿ, ಜ.27: ಸಾಲಿಗ್ರಾಮದ ಡಿವೈನ್ ಪಾರ್ಕ್‌ನ ಹೊಸ ಯೋಜನೆಯಾದ ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನ ಜಿಲ್ಲೆಯ ಮೂಡಗಿಳಿಯಾರು ಗ್ರಾಮದಲ್ಲಿರುವ ಯೋಗಬನದಲ್ಲಿ ಫೆ.1ರಂದು ಉದ್ಘಾಟನೆಗೊಳ್ಳಲಿದೆ ಎಂದು ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ವಿವೇಕ ಉಡುಪ ತಿಳಿಸಿದ್ದಾರೆ.

ಉಡುಪಿಯಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿವರಗಳನ್ನು ನೀಡಿದ ಡಾ.ವಿವೇಕ ಉಡುಪ, ಸರ್ವಕ್ಷೇಮ ಆಸ್ಪತ್ರೆ ಮತ್ತು ಸಂಶೋಧನಾ ಪ್ರತಿಷ್ಠಾನವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರು ಬೆಳಗ್ಗೆ 10ಗಂಟೆಗೆ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈನ್ ಪಾರ್ಕ್ ಟ್ರಸ್ಟ್‌ನ ಅಧ್ಯಕ್ಷ ಡಾ.ಚಂದ್ರಶೇಖರ ಉಡುಪ (ಡಾಕ್ಟರ್‌ಜೀ) ವಹಿಸಲಿದ್ದಾರೆ. ಇದೇ ಸಂದರ್ಭ ದಲ್ಲಿ ಜಗತ್ತಿನ ಅತಿ ಎತ್ತರದ ಸ್ವಾಮಿ ವಿವೇಕಾನಂದ ಪ್ರತಿಮೆಯನ್ನು ಬೆಂಗಳೂರು ಜಿಗಣಿಯ ಸ್ವಾಮಿ ವಿವೇಕಾನಂದ ಯೋಗ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಚ್.ಆರ್. ನಾಗೇಂದ್ರ ಉದ್ಘಾಟಿಸಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಭಾಗವಹಿಸಲಿದ್ದಾರೆ. ಅಲ್ಲದೇ ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ, ಬೆಂಗಳೂರು ಆರೋಗ್ಯಧಾಮ ಪ್ರಕೃತಿ ಚಿಕಿತ್ಸಾ ಕೇಂದ್ರದ ಸಂಸ್ಥಾಪಕ ಡಾ.ವೈ.ರುದ್ರಪ್ಪ, ಮಣಿಪಾಲ ಮಾಹೆಯ ಡಾ.ಜಿ.ಅರುಣ ಮಯ್ಯ, ಉಜಿರೆ ಧರ್ಮಸ್ಥಳ ಯೋಗ ವಿಜ್ಞಾನ ವಿವಿಯ ಪ್ರಾಂಶುಪಾಲ ಡಾ.ಪ್ರಶಾಂತ ಶೆಟ್ಟಿ ಅವರೂ ಪಾಲ್ಗೊಳ್ಳಲಿದ್ದಾರೆ.

ಪ್ರಾಚೀನ ದೇಗುಲದ ವಾಸ್ತುವಿನ್ಯಾಸವನ್ನು ಹೊಂದಿರುವ ಆಸ್ಪತ್ರೆ, ಕರಾವಳಿಯ ಪ್ರಾಚೀನ ಶೈಲಿಯಲ್ಲಿ ನಿರ್ಮಾಣಗೊಂಡಿದೆ. ಪ್ರಕೃತಿ, ಯೋಗ, ಆಹಾರ, ಆಧ್ಯಾತ್ಮ, ಸಂಗೀತ, ಹಸಿರು, ಹಾಸ್ಯ, ವೌನ ಚಿಕಿತ್ಸೆಯ ಸಂಗಮ ಇದಾಗಿದೆ. ಇಲ್ಲಿ 35 ಅಡಿ ಎತ್ತರದ ಸ್ವಾಮಿ ವಿವೇಕಾನಂದರ ಪ್ರತಿಮೆಯನ್ನು ನಿರ್ಮಿಸಲಾಗಿದೆ ಎಂದು ಡಾ.ವಿವೇಕ ಉಡುಪ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಡಿವೈನ್‌ಪಾರ್ಕ್‌ನ ಪದಾಧಿಕಾರಿಗಳಾದ ಸುದೇಶ್ ರಾವ್, ಅಜಿತ್ ಅಮೀನ್, ಸಿ.ಆರ್.ಮಂಜುನಾಥ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News