ಪೌರತ್ವ ವಿರೋಧಿ ಹೋರಾಟ ರಾಷ್ಟ್ರ ವಿರೋಧಿ: ನಳಿನ್ ಕುಮಾರ್ ಕಟೀಲು

Update: 2020-01-28 09:28 GMT

ಮಂಗಳೂರು, ಜ. 27: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ನಡೆಸುತ್ತಿರುವುದು ರಾಷ್ಟ್ರ ವಿರೋಧಿ ಹೋರಾಟಗಳಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಟೀಕಿಸಿದ್ದಾರೆ.

ನಗರದ ಬಂಗ್ರ ಕೂಳೂರಿನ ಗೋಲ್ಡ್‌ಪಿಂಚ್ ಮೈದಾನದಲ್ಲಿ ಕರ್ನಾಟಕ ರಾಜ್ಯ ಬಿಜೆಪಿ ಮತ್ತು ಜಿಲ್ಲಾ ಬಿಜೆಪಿ ವತಿಯಿಂದ ಇಂದು ಕೇಂದ್ರ ಸರಕಾರದ ಜಾರಿ ಮಾಡಿರುವ ಪೌರತ್ವ ತಿದ್ದುಪಡಿ ಪರ ಜಾಗೃತಿ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.

ಕಾಂಗ್ರೆಸ್‌ನ ಕಾರಣದಿಂದ ರಾಷ್ಟ್ರ ವಿಭಜನೆಯಾಗಿದೆ. ಆ ಕಾರಣದಿಂದಾಗಿ ಈಗ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್‌ ಶಾ ಅವರು ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಅವರನ್ನು ಅಭಿನಂದಿಸಲು ಈ ಸಮಾವೇಶ ನಡೆಯುತ್ತಿದ್ದೆ. ಜೊತೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಬಗ್ಗೆ ಜನರಿಗೆ ಸರಿಯಾಗಿ ಮನವರಿಕೆ ಮಾಡಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.

ಸಮಾರಂಭದಲ್ಲಿ ನಾಗಲ್ಯಾಂಡ್‌ನ ಮಾಜಿ ರಾಜ್ಯಪಾಲ ಪದ್ಮನಾಭ ಆಚಾರ್ಯ, ಕೇಂದ್ರ ಸಚಿವ ಸದಾನಂದ ಗೌಡ, ಸಂಸದರಾದ ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಶಾಸಕರಾದ ಅಂಗಾರ, ಸಂಜೀವ ಮಠಂದೂರು, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕಾ, ವೇದವ್ಯಾಸ ಕಾಮತ್, ಹರೀಶ್ ಪೂಂಜಾ, ಡಾ. ಭರತ್ ಶೆಟ್ಟಿ, ಸುಕುಮಾರ ಶೆಟ್ಟಿ, ವಿಧಾನಸಭೆಯ ಮುಖ್ಯ ಸಚೇತಕ ಸುನಿಲ್ ಕುಮಾರ್, ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಸಮಾವೇಶದ ರಾಜ್ಯ ಸಂಚಾಲಕ ರವಿ ಕುಮಾರ್, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.

ಎಲ್ಲೆಲ್ಲೂ ಹಾರಾಡಿದ ಬಿಜೆಪಿಯ ಧ್ವಜ

ಬಂಗ್ರ ಕೂಳೂರು ಮೈದಾನದಲ್ಲಿ ಪೌರತ್ವ ತಿದ್ದುಪಡಿ ಪರ ಜಾಗೃತಿ ಸಮಾವೇಶದಲ್ಲಿ ಎಲ್ಲೆಲ್ಲೂ ಬಿಜೆಪಿ ಪಕ್ಷದ ಧ್ವಜಗಳು ಹಾರಾಡುತ್ತಿದ್ದು, ಇದು ವ್ಯಾಪಕ ಚರ್ಚೆಗೆ ಕಾರಣವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News