ಮಸೀದಿಯ ನಿವೃತ್ತ ಸಿಬ್ಬಂದಿಗಳಿಗೂ ಪಿಂಚಣಿ: ಅಝೀಝ್ ಕೃಷ್ಣಾಪುರ

Update: 2020-01-27 16:51 GMT

ಮಂಗಳೂರು, ಜ.27: ಮಸೀದಿಗಳಲ್ಲಿ ಖತೀಬ್, ಮುಅದ್ಸಿನ್‌ಗಳಾಗಿ ಸೇವೆ ಸಲ್ಲಿಸಿ ವಯೋ ಸಹಜ ನಿವೃತ್ತರಾದವರಿಗೂ ಮಾಸಿಕ 2,000 ರೂ. ಮೊತ್ತದ ಪಿಂಚಣಿ ನೀಡಲಾಗುವುದು ಎಂದು ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಕೃಷ್ಣಾಪುರ ತಿಳಿಸಿದ್ದಾರೆ.

ದ.ಕ. ಜಿಲ್ಲಾ ವಕ್ಫ್ ಕಚೇರಿಯಲ್ಲಿ ಸೋಮವಾರ ನಡೆದ ಸಮಿತಿಯ ಸರ್ವ ಸದಸ್ಯರ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.  ನಿವೃತ್ತರಿಗೆ ಪಿಂಚಣಿ ನೀಡುವ ಬಗ್ಗೆ ಅರಿವು ಮೂಡಿಸಲಾಗುವುದು. ಮಸೀದಿಯ ನಿವೃತ್ತ ಸಿಬ್ಬಂದಿಗಳು ವಾಸಿಸುತ್ತಿರುವ ಪ್ರದೇಶದ ಜಮಾಅತ್ ಕಮಿಟಿಯವರು ಜಿಲ್ಲಾ ವಕ್ಫೃ್ ಕಚೇರಿಯಲ್ಲಿ ಇದಕ್ಕೆ ಸಂಬಂಧಿಸಿ ಅರ್ಜಿ ಸಲ್ಲಿಸಬಹುದು ಎಂದು ಅಝೀಝ್ ಕೃಷ್ಣಾಪುರ ಹೇಳಿದರು.

ಸೇವೆಯಲ್ಲಿರುವ ಖತೀಬ್/ಮುಅದ್ಸಿನ್‌ಗಳಿಗೆ ವಕ್ಫ್‌ನಿಂದ ನೀಡಲಾಗುತ್ತಿರುವ ವೇತನ ಯೋಜನೆಗೆ ಇನ್ನಷ್ಟು ಫಲಾನುಭವಿಗಳನ್ನು ಸೇರಿಸಲಾಗುವುದು. ವಕ್ಫೃ್ನಿಂದ ವೇತನ ಪಡೆಯುವ ಸಿಬ್ಬಂದಿಗಳು, ಆಯಾ ಮಸೀದಿಯ ಕೆಲಸ ಬಿಟ್ಟು ಹೋದರೆ, ವಕ್ಫ್ ಸಮಿತಿಗೆ ಮಾಹಿತಿ ನೀಡಬೇಕು. ಇಲ್ಲದಿದ್ದರೆ ಆಯಾ ಮಸೀದಿ ಕಮಿಟಿಯವರೇ ಜವಾಬ್ದಾರಿ ಆಗುತ್ತಾರೆ ಎಂದ ಅಝೀಝ್, ಸಮುದಾಯ ಭವನ, ಶಾದಿಮಹಲ್ಗಳ ನಿರ್ಮಾಣಕ್ಕೆ ವಕ್ಫೃ್ನಿಂದ ಸಾಲ ಪಡೆದು, ಬಳಿಕ ಸಾಲ ಮರುಪಾವತಿಸದ ಹಲವು ಪ್ರಕರಣಗಳು ಜಿಲ್ಲೆಯಲ್ಲಿ ಕಂಡು ಬಂದಿವೆ. ಈ ಹಿನ್ನೆಲೆಯಲ್ಲಿ ಸಾಲ ಮಂಜೂರು ಮಾಡುವಾಗ, ಸಮಿತಿಯ ಸಾಲ ಮರುಪಾವತಿ ಸಾಮರ್ಥ್ಯವನ್ನು ಗಮನಿಸಲಾಗುವುದು ಎಂದರು.

ಮಸೀದಿಗಳಿಗೆ ಶುದ್ಧ ಕುಡಿಯುವ ಒದಗಿಸಲು ಪ್ಯೂರಿಪೈಯರ್ ಘಟಕವನ್ನು ಈಗಾಗಲೇ ಜಿಲ್ಲೆಯ 54 ಮಸೀದಿಗಳಿಗೆ ನೀಡಲಾಗಿದೆ. ಇನ್ನಷ್ಟು ಮಸೀದಿಗಳಿಗೆ ಇದನ್ನು ನೀಡಲಾಗುವುದು ಎಂದರು.

ಕಿಡ್ನಿ, ಕ್ಯಾನ್ಸರ್ ಸಹಿತ ಗಂಭೀರ ಕಾಯಿಲೆಗಳಿಂದ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯರಿಗೆ ಚಿಕಿತ್ಸಾ ವೆಚ್ಚ ಮಂಜೂರು ಮಾಡಲು ವಕ್ಫ್ ಸಮಿತಿಯಲ್ಲಿ ಅವಕಾಶವಿದೆ. ಈ ರೋಗಗಳಿಂದ ಬಳಲುತ್ತಿರುವ ಮಹಿಳೆಯರು ಇದರ ಪ್ರಯೋಜನ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ ಎಂದು ಅಬ್ದುಲ್ ಅಝೀಝ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News